ಒಂದೇ ಕುಟುಂಬಕ್ಕೆ ವಿವಾಹವಾಗಿದ್ದ ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ: ಮೃತರಲ್ಲಿ ಈರ್ವರು ಗರ್ಭಿಣಿಯರು
Sunday, May 29, 2022
ದುಡು(ರಾಜಸ್ಥಾನ): ಒಂದೇ ಕುಟುಂಬಕ್ಕೆ ವಿವಾಹವಾಗಿದ್ದ ಮೂವರು ಸೋದರಿಯರು ಹಾಗೂ ಮಕ್ಕಳೀರ್ವರು ಸೇರಿ ಐವರ ಮೃತದೇಹ ಬಾವಿವೊಂದರಲ್ಲಿ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ದುಡು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರೆಂಬುದು ತಿಳಿದು ಬಂದಿದೆ. ವರದಕ್ಷಿಣೆಗೋಸ್ಕರ ಅತ್ತೆ ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾರದೆ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಕಾಳುದೇವಿ(25), ಮಮತಾ(23) ಹಾಗೂ ಕಮಲೇಶಿ(20) ಮೃತ ಸಹೋದರಿಯರು. ಇಬ್ಬರು ಮಕ್ಕಳಲ್ಲಿ ಒಂದು ಮಗು ನಾಲ್ಕು ವರ್ಷದ್ದು, ಮತ್ತೊಂದು ಕೇವಲ 27 ದಿನದ ಮಗು ಎಂದು ತಿಳಿದು ಬಂದಿದೆ. ಇವೆರಡೂ ಕಾಳುದೇವಿಯ ಮಕ್ಕಳೆಂದು ಹೇಳಲಾಗುತ್ತಿದೆ. ಮಮತಾ ಹಾಗೂ ಕಮಲೇಶಿ ಗರ್ಭಿಣಿಯರಾಗಿದ್ದರು.
ಈ ಸೋದರಿಯರು ಮನೆಯಿಂದ 2 ಕಿಲೋಮೀಟರ್ ದೂರದ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಈಗಾಗಲೇ ಎಲ್ಲರ ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಲಾಗಿದೆ. ವರದಕ್ಷಿಣೆಯ ವಿಚಾರವಾಗಿ ಅತ್ತೆ ನೀಡುತ್ತಿದ್ದ ಕಿರುಕುಳದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೇ 25ರಂದು ದುಡು ಪೊಲೀಸ್ ಠಾಣೆಯಲ್ಲಿ ಮೂವರು ಸಹೋದರಿಯರು ಕಾಣೆಯಾದ ಬಗ್ಗೆ ಎಫ್ಐಆರ್ ದಾಖಲಾಗಿತ್ತು. ಈ ಮಧ್ಯೆ ಮೃತನ ಸಹೋದರ ವರದಕ್ಷಿಣೆಗೋಸ್ಕರ ತಮ್ಮ ಸಹೋದರಿಯರಿಗೆ ಅತ್ತೆ ಹಿಂಸೆ ನೀಡುತ್ತಿದ್ದರೆಂದು ಆರೋಪ ಮಾಡಿದ್ದಾರೆ. ಇದೀಗ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.