ಮಹಿಳೆಯರು ಹಿಂದೂಗಳ ಮಳಿಗೆಯಲ್ಲಿಯೇ ಚಿನ್ನ ಖರೀದಿಸಲು ಪ್ರಮೋದ್ ಮುತಾಲಿಕ್ ಮನವಿ!
Monday, May 2, 2022
ಮಂಗಳೂರು: ಕೇರಳ ಮೂಲದ ಚಿನ್ನ ಮಾಫಿಯಾ ಜಾಲವು ಹಿಂದೂ ಸಮಾಜ ಹಾಗೂ ಹಿಂದೂ ದೇಶಕ್ಕೆ ಅಪಾಯಕಾರಿಯಾಗಿದೆ. ದುಷ್ಕೃತ್ಯ ಎಸಗುವವರಿಗೆ ಈ ಜಾಲವು ಸಹಕಾರ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯ ದಿನದಂದು ಈ ಜಾಲಕ್ಕೆ ಪಾಠ ಕಲಿಸಬೇಕಾಗಿದೆ. ಆದ್ದರಿಂದ ಅಕ್ಷಯ ತೃತೀಯದಂದು ಮಹಿಳೆಯರು ಹಿಂದೂಗಳ ಚಿನ್ನದಂಗಡಿಯಲ್ಲಿಯೇ ಚಿನ್ನ ಖರೀದಿಸಬೇಕೆಂದು ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.
ದುಬೈನಿಂದ ಕಳ್ಳತನದಿಂದ ಸಾಗಾಟಗೊಂಡಿರುವ ಚಿನ್ನವು ಕೇರಳಕ್ಕೆ ಸಾಗಾಟವಾಗುತ್ತದೆ. ಅಲ್ಲಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ. ಕೇರಳ ರಾಜ್ಯವು ಕಳ್ಳತನದಿಂದ ಚಿನ್ನ ಸರಬರಾಜು ಆಗುವ ಅತೀ ದೊಡ್ಡ ಕೇಂದ್ರವಾಗಿದೆ. ಕಳ್ಳತನದಿಂದ ಬರುವ ಚಿನ್ನದ ಮಾಫಿಯಾವು ಹಿಂದೂ ಸಮಾಜಕ್ಕೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ಆದ್ದರಿಂದ ಮಹಿಳೆಯರು, ಮಹಿಳಾ ಸಂಘಟನೆ ಇದನ್ನು ಗಮನಿಸಬೇಕಾಗಿದೆ ಎಂದು ಹೇಳಿದರು. ಕೇರಳದಲ್ಲಿ 800 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆ ನಡೆಸಲಾಗಿದೆ. ಹಿಂದೂ ಸಿದ್ಧಾಂತ ಹೊಂದಿರುವ, ದೇಶಭಕ್ತಿಯ ಕಾರ್ಯ ಎಸಗಿರುವ ಯುವಕರು ಇಲ್ಲಿ ಕೊಲೆಯಾಗಿದ್ದಾರೆ. ಈ ಕೊಲೆಗಡುಕರಿಗೆ, ಈ ಮುಸ್ಲಿಂ ಕಿಡಿಗೇಡಿ ಜಾಲಕ್ಕೆ ಅಕ್ರಮ ಸಾಗಾಟದ ಚಿನ್ನದ ವ್ಯವಹಾರದಿಂದ ಬರುವ ಹಣ ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ರಾಜ್ಯದಿಂದ ನಿರಂತರವಾಗಿ ಗೋವುಗಳು, ಗೋಮಾಂಸ ನಿರಂತರವಾಗಿ ಸಾಗಾಟ ಮಾಡಲಾಗುತ್ತಿದೆ. ಕೇರಳದಿಂದ ವಿದೇಶಕ್ಕೂ ಗೋಮಾಂಸ ರಫ್ತು ಆಗುತ್ತಿದೆ. ಈ ಎಲ್ಲಾ ಕಾರ್ಯಗಳಿಗೆ ಕಳ್ಳ ದಂಧೆ ಎಸಗುತ್ತಿರುವ ಚಿನ್ನದ ವ್ಯಾಪಾರಿಗಳು ನೆರವು ನೀಡುತ್ತಿದ್ದಾರೆ. ಕೇರಳ ರಾಜ್ಯ ಒಂದರಲ್ಲೇ 12 ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿದೆ. ಈ ಯುವತಿಯರನ್ನು ದುಬೈ, ಅರಬ್ ರಾಷ್ಟ್ರಗಳಿಗೆ ಮಾರಾಟ ಮಾಡಿದ್ದೂ ಇದೆ. ಇಂತಹ ದುಷ್ಕೃತ್ಯಗಳಿಗೆ ಚಿನ್ನದ ವ್ಯಾಪಾರಿಗಳು ಪರ್ಯಾಯವಾಗಿ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಹಿಂದೂ ಚಿನ್ನದಂಗಡಿಯಲ್ಲಿಯೇ ಚಿನ್ನ ಖರೀದಿಸಬೇಕೆಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.