ಮಂಗಳೂರು: ಮತ್ತೆ ಕಾಣಿಸಿಕೊಂಡ ಹಿಜಾಬ್ ವಿವಾದದ ಕಿಡಿ; ಯುನಿವರ್ಸಿಟಿ ಕಾಲೇಜಿನಲ್ಲಿ ಪ್ರತಿಭಟನೆ
Thursday, May 26, 2022
ಮಂಗಳೂರು: ಕೆಲ ಸಮಯಗಳಿಂದ ತಣ್ಣಗಿದ್ದ ಹಿಜಾಬ್ ವಿವಾದದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಇಂದು ಮಂಗಳೂರಿನ ಯುನಿವರ್ಸಿಟಿ ಕಾಲೇಜಿನ ಪದವಿ ವಿದ್ಯಾರ್ಥಿನಿಯರು ಧರಿಸಿಕೊಂಡು ಬರುತ್ತಿದ್ದಾರೆ. ಇದು ಸರಕಾರದ ನಿಯಮಕ್ಕೆ ವಿರುದ್ಧವಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜು ತರಗತಿಗಳಲ್ಲಿಯೂ ವಿದ್ಯಾರ್ಥಿಯರು ಹಿಜಾಬ್ ಧರಿಸುತ್ತಿದ್ದಾರೆಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾಲೇಜು ವಿದ್ಯಾರ್ಥಿ ನಾಯಕ ಹಿಜಾಬ್ ಪರ ಇದ್ದಾರೆ ಎಂದು ಆರೋಪಿಸಿ ಆತನ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ವಿರುದ್ಧವೂ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಿಜಾಬ್ ನಿಯಮವನ್ನು ಕಾಲೇಜಿನಲ್ಲಿ ಅಳವಡಿಸುವಂತೆ ಆಗ್ರಹಿಸಿದರು.
ಆದರೆ ಹಿಜಾಬ್ ಬೇಕೆಂದು ಆಗ್ರಹಿಸುವ ವಿದ್ಯಾರ್ಥಿಗಳು, ಈ ಪ್ರತಿಭಟನೆ ಎಬಿವಿಪಿ ನಡೆಸಿರುವ ಷಡ್ಯಂತರ. ಕಳೆದ ತಮಗೆ ಹಿಜಾಬ್ ಧರಿಸಿಯೇ ತರಗತಿ ಪ್ರವೇಶಕ್ಕೆ ಅವಕಾಶವಿತ್ತು. ನಾವು ಹಿಜಾಬ್ ಧರಿಸಿಯೇ ಪರೀಕ್ಷೆಯನ್ನು ಬರೆದಿದ್ದೇವೆ. ಯುನಿಫಾರ್ಮ್ ಶಾಲ್ ನ ಬಣ್ಣದ ಶಿರವಸ್ತ್ರ ಧರಿಸಬಹುದೆಂದು ಕಾಲೇಜು ಪ್ರಾಸ್ಫೆಕ್ಟ್ ನಲ್ಲಿಯೂ ಉಲ್ಲೇಖವಿದೆ. ಆದರೆ ಈ ಬಾರಿಯ ಸಿಂಡಿಕೇಟ್ ಸಭೆಯಲ್ಲಿ ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶವಿಲ್ಲವೆಂದು ನಿರ್ಧಾರವಾಗಿತ್ತು. ಈ ಬಗ್ಗೆ ನೋಟಿಸ್ ಬೋರ್ಡ್ ನಲ್ಲಿಯೂ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವಾರಗಳಿಂದ ಹಿಜಾಬ್ ಧರಿಸಿರುವ 43 ವಿದ್ಯಾರ್ಥಿನಿಯರಿಗೆ ತರಗತಿಗೆ ಅವಕಾಶ ಕೊಟ್ಟಿರಲಿಲ್ಲ. ನಾವು ಕಾಲೇಜು ಲೈಬ್ರರಿಯಲ್ಲಿದ್ದುಕೊಂಡೇ ನೋಟ್ಸ್ ಬರೆಯುತ್ತಿದ್ದೆವು.
ಈ ನಡುವೆ ಹಿಜಾಬ್ ಬೇಕೆಂದು ಪ್ರಾಂಶುಪಾಲರಿಗೆ ಅವಕಾಶ ಕೊಡಬೇಕೆಂದು ಮನವಿ ನೀಡಿದ್ದೆವು. ಆದರೆ ಪ್ರಾಂಶುಪಾಲರು ಈ ವಿಚಾರದಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿಗೆ ಮನವಿ ನೀಡಿದ್ದೇವೆ. ಡಿಸಿ ಸೋಮವಾರ ತಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಗಡುವು ನೀಡಿದ್ದಾರೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.