ರಾಜಸ್ಥಾನದ ಕಾಂಗ್ರೆಸ್ ಸಚಿವನ ಪುತ್ರನ ವಿರುದ್ಧ ಯುವತಿಯಿಂದ ಅತ್ಯಾಚಾರ ಆರೋಪ: ಎಫ್ಐಆರ್ ದಾಖಲು!
Monday, May 9, 2022
ನವದೆಹಲಿ: ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಆರೋಪದ ಮೇಲೆ ರಾಜಸ್ಥಾನದ ಕಾಂಗ್ರೆಸ್ ಸಚಿವನ ಪುತ್ರನ ಮೇಲೆ ರಾಜಧಾನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿ ಕಳೆದ ವರ್ಷ ಜೈಪುರ ಹಾಗೂ ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ರವಿವಾರ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯ ಪೊಲೀಸರು ಅತ್ಯಾಚಾರ, ಪ್ರಜ್ಞೆ ತಪ್ಪುವ ಪದಾರ್ಥ ನೀಡಿರುವುದು, ಗರ್ಭಪಾತ ಮಾಡಿರೋದು, ಮದುವೆಯಾಗಲು ಬಲವಂತ ಹಾಗೂ ಅಪಹರಣ, ಅನೈಸರ್ಗಿಕ ಅಪರಾಧ, ಬೆದರಿಕೆ ಮತ್ತು ಲೈಂಗಿಕ ದೌರ್ಜನ್ಯ ಆರೋಪಗಳ ಮೇಲೆ ಐಪಿಸಿಯ ವಿವಿಧ ಕಲಂಗಳಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ದೂರು ನೀಡಿರುವ ಯುವತಿ 'ಸಚಿವರ ಪುತ್ರ ಫೇಸ್‌ಬುಕ್ ಮೂಲಕ ತನಗೆ ಕಳೆದ ವರ್ಷ ಪರಿಚಯವಾಗಿದ್ದರು. ಈ ಹಿನ್ನೆಲೆಯಲ್ಲಿ ನಾವಿಬ್ಬರು ಜೈಪುರದಲ್ಲಿ ಭೇಟಿಯಾಗಿದ್ದೆವು. ಬಳಿಕ ತನ್ನನ್ನು 2021ರ ಜ.8ರಂದು ಜೈಪುರದ ಸವಾಯಿ ಮಾಧವ್ ಪುರಕ್ಕೆ ಕರೆಸಿಕೊಂಡಿದ್ದರು. ಈ ಸಂದರ್ಭ ರಾತ್ರಿ ತನಗೆ ಪ್ರಜ್ಞೆ ತಪ್ಪುವ ಪಾನೀಯ ಸೇವನೆ ಮಾಡಲು ನೀಡಿದ್ದಾರೆ. ಮರುದಿನ ಬೆಳಗ್ಗೆ ನಾನು ಎದ್ದಾಗ ನನ್ನ ನಗ್ನ ಫೋಟೋ ಮತ್ತು ವೀಡಿಯೋವನ್ನು ಅವರು ನನಗೆ ತೋರಿಸಿದ್ದಾರೆ. ನನಗೆ ಬಹಳ ಭಯವಾಯಿತು ಮತ್ತು ನಾನು ಅಳುವುದಕ್ಕೆ ಶುರು ಮಾಡಿದೆ' ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ.
'ನಾವು ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ನಾವಿಬ್ಬರು ಪತಿ - ಪತ್ನಿ ಎಂದು ನಮೂದಿಸಿದ್ದರು. ಬಳಿಕ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಹೊಟೇಲ್ ಕೊಠಡಿಯಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಅವರು ನನ್ನನ್ನು ನಿಂದಿಸುವುದಕ್ಕೆ ಶುರು ಮಾಡಿದರು. ನನ್ನ ಮೇಲೆ ಹಲ್ಲೆ ಮಾಡುವುದಾಗಿಯೂ, ನನ್ನ ನಗ್ನ ದೃಶ್ಯವನ್ನು ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದರು' ಎಂದು ಹೇಳಿರುವುದು ಎಫ್‌ಐಆರ್ ವಿವರವಾಗಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ 11ರಂದು ನಾನು ಗರ್ಭವತಿಯಾಗಿದ್ದೆ. ಈ ಸಂದರ್ಭ ಅವರು ಮಗು ಬೇಡ ಎಂದಿದ್ದರು. ನನಗೆ ಬಲವಂತವಾಗಿ ಮಾತ್ರೆ ನೀಡಿದರು, ಆದರೆ ನಾನು ಸೇವಿಸಲಿಲ್ಲ ಎಂದು ತಿಳಿಸಿದ್ದಾರೆ
ದೂರಿನಲ್ಲಿ ತಿಳಿಸಿರುವಂತೆ ಕಾಂಗ್ರೆಸ್ ಸಚಿವರ ಪುತ್ರ, ಈ ಯುವತಿಯ ಮೇಲೆ ದೆಹಲಿ ಮತ್ತು ಜೈಪುರದಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ಅದಲ್ಲದೆ ಮದುವೆಯಾಗುವಂತೆ ಬಲ ಪ್ರಯೋಗ ಮಾಡಿರುವುದು ಕಾಣುತ್ತದೆ. ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಚಾರವಾಗಿ ರಾಜಸ್ಥಾನ ಪೊಲೀಸರನ್ನು ಸಂಪರ್ಕಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.