ಪ್ರಜ್ಞೆ ತಪ್ಪುವ ಪದಾರ್ಥ ನೀಡಿ ಶಿಕ್ಷಕಿಯ ಮೇಲೆ ಅತ್ಯಾಚಾರ: ಮತಾಂತರವಾಗಲು ಒತ್ತಡ, ಬ್ಲ್ಯಾಕ್ ಮೇಲ್
Saturday, May 14, 2022
ಶಹಜಹಾನ್ಪುರ(ಉತ್ತರ ಪ್ರದೇಶ): ಶಿಕ್ಷಕಿಯೋರ್ವರಿಗೆ ಪರಿಚಿತ ಅನ್ಯಕೋಮಿನ ಯುವಕ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ ಅತ್ಯಾಚಾರ ಎಸಗಿ, ಬಳಿಕ ಬ್ಲಾಕ್ ಮೇಲ್ ಮಾಡಿ, ಮತಾಂತರಕ್ಕೆ ಒತ್ತಡ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರ ನಡೆಸುವ ವೀಡಿಯೋವನ್ನು ಸೆರೆ ಹಿಡಿದಿರುವ ಆರೋಪಿ, ಆ ಬಳಿಕ ಮತಾಂತರಗೊಂಡು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆಂದು 28 ವರ್ಷದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನನ್ವಯ ಪೊಲೀಸರು ಆರೋಪಿ ಅಮೀರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮೇ 4ರಂದು ಶಿಕ್ಷಕಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆಗ ಅಲ್ಲಿಗೆ ಬೊಲೆರೋ ಕಾರಿನಲ್ಲಿ ಬಂದ ಕಾಮುಕ ಅಮೀರ್, ಡ್ರಾಪ್ ಮಾಡುವುದಾಗಿ ತಿಳಿಸಿದ್ದಾನೆ. ಆತ, ಮೊದಲಿನಿಂದಲೂ ಪರಿಚಯವಿದ್ದ ಕಾರಣ, ಶಿಕ್ಷಕಿ ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಮಾರ್ಗ ಮಧ್ಯೆ ಆಕೆಗೆ ಪ್ರಜ್ಞೆ ತಪ್ಪುವ ಪದಾರ್ಥ ನೀಡಿ, ಬೇರೊಂದು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತನ್ನ ಅಶ್ಲೀಲ ವೀಡಿಯೋವನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿ, ಮತಾಂತರ ಮಾಡಿಕೊಂಡು ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ.
ಶಿಕ್ಷಕಿಗೆ ಪ್ರಜ್ಞೆ ಬಂದಾಗ ಆರೋಪಿಯೊಂದಿಗೆ ಆತನ ತಾಯಿ, ತಂದೆಯೂ ಇದ್ದರು. ಈ ವೇಳೆ ಅವರು ತನಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕಿದ್ದಾರೆಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್, ಅತ್ಯಾಚಾರ ನಡೆದಿರುವ ಬಗ್ಗೆ ಶಿಕ್ಷಕಿ ದೂರು ನೀಡಿದ್ದಾರೆ. ಈಗಾಗಲೇ ದೂರಿನನ್ವಯ ಆರೋಪಿ ಅಮೀರ್, ಆತನ ತಾಯಿ, ಸಹೋದರಿ, ಸಹೋದರ ಹಾಗೂ ತಂದೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.