ಬಾಂಗ್ಲಾ ಯುವತಿಯ ಮೇಲೆ ಕಾಮುಕರ ಅಟ್ಟಹಾಸ ಪ್ರಕರಣ: ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
Friday, May 20, 2022
ಬೆಂಗಳೂರು: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಬೆಂಗಳೂರಿನಲ್ಲಿ ನಡೆದಿರುವ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
2021, ಮೇ 18ರಂದು ನಗರದ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ಯುವತಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದರು. ಈ ವೀಡಿಯೋ ಬಾಂಗ್ಲಾ ದೇಶದಲ್ಲಿ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತ ಬಾಂಗ್ಲಾ ಪೊಲೀಸರು, ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೆಲವೇ ದಿನಗಳಲ್ಲಿ ಬರೋಬ್ಬರಿ 10 ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದರು.
ಈ ಪ್ರಕರಣದಲ್ಲಿ ಕೇವಲ ಅತ್ಯಾಚಾರ ಕೇಸ್ ಅಲ್ಲದೆ ಮಾನವ ಕಳ್ಳ ಸಾಗಾಣಿಕೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಗಳನ್ನು ಸಂಗ್ರಹಿಸಿ, 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಪ್ರಕರಣದ ಪ್ರಮುಖ 7 ಜನ ಅಪರಾಧಿಗಳಾದ ಸೋಭುಜ್ ಶೇಖ್, ರಿದಯ್ ಬಾಬು, ರಫ್ ಸನ್ ಮಂಡಲ್, ರಕಿಬುಲ್ ಇಸ್ಲಾಂ ಸಾಗರ್, ಮಹಮ್ಮದ್ ಬಾಬು, ದಲಿಮ್, ಅಜೀಂಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದಂತೆ ತಾನಿಯಾಗೆ 20 ವರ್ಷ ಜೈಲು ಹಾಗೂ ಜಮಾಲ್ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನುಸ್ರತ್ ಹಾಗೂ ಕಾಜಲ್ ಎಂಬುವರಿಗೆ 9 ತಿಂಗಳ ಶಿಕ್ಷೆ ಹಾಗೂ ದಂಢ ವಿಧಿಸಲಾಗಿದೆ. ಜೊತೆಗೆ ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಅಖಿಲ್ ಎಂಬಾತ ಪ್ರಕರಣದಿಂದ ಖುಲಾಸೆಯಾಗಿದ್ದಾನೆ.