ಪತಿಯ ಮುಂಭಾಗವೇ ಮಹಿಳೆಯ ವಿವಸ್ತ್ರಗೊಳಿಸಿ ಕಾಮುಕರ ಅಟ್ಟಹಾಸ: ಗೃಹಸಚಿವರ ಸ್ವಕ್ಷೇತ್ರದಲ್ಲೇ ಹೇಯ ಕೃತ್ಯ
Thursday, May 12, 2022
ತೀರ್ಥಹಳ್ಳಿ: ಆಸ್ಪತ್ರೆಯಿಂದ ಮರಳುತ್ತಿದ್ದ ಮಹಿಳೆಯನ್ನು ಕಾಮುಕರ ತಂಡವೊಂದು ವಿವಸ್ತ್ರಗೊಳಿಸಿ ಪತಿಯ ಮುಂಭಾಗವೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ತೀರ್ಥಹಳ್ಳಿ ತಾಲೂಕಿನ ಆರಗ ಬಳಿ ನಡೆದಿದೆ.
ಎರಡು ದಿನಗಳ ಹಿಂದೆ ಈ ಹೇಯಕೃತ್ಯ ಸಂಭವಿಸಿದೆ. ಆದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ದಲಿತ ಸಂಘಟನೆ ಪಟ್ಟು ಹಿಡಿದ ಬಳಿಕ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಲೆಂದು ಪತಿ ಸೋಮವಾರ ಸಂಜೆ ಆಸ್ಪತ್ರೆಗೆಂದು ತೀರ್ಥಹಳ್ಳಿಗೆ ಕರೆದುಕೊಂಡು ಬಂದಿದ್ದರು. ವೈದ್ಯರಿಗೆ ತೋರಿಸಿದ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಬಸ್ಸಿನಲ್ಲಿ ಆರಗ ಗೇಟಿನ ಬಳಿ ದಂಪತಿ ಇಳಿದಿದ್ದಾರೆ. ಹೋಟೆಲ್ನಲ್ಲಿ ಊಟ ಪಾರ್ಸೆಲ್ ತೆಗೆದುಕೊಂಡು ಸುಮಾರು 2 ಕಿಮೀ ದೂರದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆರಗ ಗೇಟ್ ಮತ್ತು ಆರಗ ಪೇಟೆಯ ನಡುವಿನ ನಿರ್ಜನ ಪ್ರದೇಶದಲ್ಲಿ ದಂಪತಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ.
ಬಳಿಕ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ಪ್ರಜ್ಞಾಹೀನನಾಗಿ ಬಿದ್ದ ಬಳಿಕ ಆರೋಪಿಗಳು ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಬೊಬ್ಬೆಯಿಟ್ಟಿದ್ದಾರೆ. ಇದನ್ನು ಕೇಳಿ ಘಟನಾ ಸ್ಥಳಕ್ಕೆ ಸಮೀಪದಲ್ಲಿದ್ದ ಸಹೋದರರಿಬ್ಬರು ಅಲ್ಲಿಗೆ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬಳಿಕ ದಂಪತಿಯನ್ನು ಆಟೋ ರಿಕ್ಷಾದಲ್ಲಿ ಅವರ ಮನೆಗೆ ಕಳುಹಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಕಿವಿ ಕೂಡ ಕೇಳಿಸುವುದಿಲ್ಲ ಎಂದೂ ಅವರ ಪರಿಚಯಸ್ಥರು ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ದೇವರಗುಡಿ ಗ್ರಾಮದ ಸಂಪತ್, ಆದರ್ಶ ಹಾಗೂ ಇತರ ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆದಿದೆ.