ಬೆಕ್ಕಿನ ಮರಿಯೆಂದು ಚಿರತೆ ಮರಿಯನ್ನೇ ಮನೆಗೆ ತಂದ ಪುಟ್ಟ ಪೋರ: ಮನೆಮಂದಿ ಶಾಕ್
Friday, May 13, 2022
ನಾಸಿಕ್(ಮಹಾರಾಷ್ಟ್ರ): ಪುಟ್ಟ ಪೋರನೋರ್ವನು ಬೆಕ್ಕಿನ ಮರಿಯೆಂದು ಚಿರತೆ ಮರಿಯೊಂದನ್ನು ಮನೆಗೆ ತಂದು ಮನೆಮಂದಿಯೆಲ್ಲಾ ಶಾಕ್ ಗೊಳಪಡುವಂತೆ ಮಾಡಿರುವ ಪ್ರಸಂಗವೊಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದಿದೆ.
ನಾಸಿಕ್ನ ಮಾಲೆಗಾಂವ್ನಲ್ಲಿ ರೈತ ಠಾಕ್ರೆ ಕುಟುಂಬದ ಮನೆಯ ಅನತಿ ದೂರದಲ್ಲಿ ಚಿರತೆಯೊಂದು ಮರಿಗಳಿಗೆ ಜನ್ಮ ನೀಡಿದೆ. ಆಟವಾಡುತ್ತ ಅಲ್ಲಿಗೆ ತೆರಳಿರುವ ಪುಟ್ಟ ಪೋರನೋರ್ವನು ಬೆಕ್ಕಿನ ಮರಿಯೆಂದುಕೊಂಡು ಚಿರತೆ ಮರಿಯನ್ನು ಮನೆಗೆ ತಂದಿದ್ದಾನೆ. ಇದರಿಂದ ಒಂದು ಸಲ ಭೀತಿಗೊಳಗಾದ ಮನೆಮಂದಿ ಬಳಿಕ ಆ ಚಿರತೆ ಮರಿಗೆ ಹಾಲು ನೀಡಿ ಪೋಷಿಸಿದ್ದಾರೆ.
ಅಲ್ಲದೆ ರಾತ್ರಿ ವೇಳೆ ತಾಯಿ ಚಿರತೆ ಬಂದು ಕರೆದೊಯ್ಯಬಹುದೆಂದು ಆ ಮರಿಯನ್ನು ಮನೆಯ ಹೊರಗಡೆ ಇಟ್ಟಿದ್ದರು. ಆದರೆ ಬೆಳಗ್ಗೆಯಾದರೂ ಚಿರತೆ ಬಾರದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಗೆ ಆ ಮರಿಯನ್ನು ಮನೆಮಂದಿ ಒಪ್ಪಿಸಿದ್ದಾರೆ. ಈ ಮಾಹಿತಿ ಸದ್ಯ ಊರಿನಲ್ಲಿ ಕಾಳ್ಗಿಚ್ಚಿನಂತೆ ಹರಿದಾಡ್ತಿದೆ.