ಮೊಬೈಲ್ ಕರೆನ್ಸಿ ಹಾಕಲು ತಂದೆ ದುಡ್ಡು ಕೊಡಲಿಲ್ಲವೆಂದು ಮರ್ಮಾಂಗಕ್ಕೇ ತ್ರಿಶೂಲ ಚುಚ್ಚಿಕೊಂಡ ಯುವಕ
Thursday, May 12, 2022
ಧಾರವಾಡ: ಕೆಲವರು ಕ್ಷುಲ್ಲಕ ವಿಚಾರಗಳಿಗೆ ಪ್ರಾಣಕ್ಕೇ ಕುತ್ತು ತರುವಂತಹ ಕೆಲಸಗಳನ್ನು ಮಾಡುತ್ತಾರೆ. ಅಂತಹದ್ದೇ ವಿಚಿತ್ರವಾದ ಪ್ರಕರಣವೊಂದು ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ ಕರೆನ್ಸಿ ಹಾಕಲು ತಂದೆ ದುಡ್ಡು ಕೊಡಲಿಲ್ಲವೆಂದು ಕುಪಿತಗೊಂಡ ಯುವಕನೋರ್ವನು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.
ಈ ಯುವಕ ಕೇವಲ 6ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ನಿರಂತರವಾಗಿ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಮಂಗಳವಾರ ಮೊಬೈಲ್ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ಅವದು ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣ ತಂದೆ - ಮಗನ ನಡುವೆ ಜಗಳ ಏರ್ಪಟ್ಟಿದೆ.
ಪರಿಣಾಮ ಕೋಪಗೊಂಡ ಯುವಕ ಗೊರವಪ್ಪನ ವೇಷ ಧರಿಸಿಕೊಂಡು ಮನೆಯ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ತೆರಳಿದ್ದಾನೆ. ಅಲ್ಲಿದ್ದ ತ್ರಿಶೂಲವೊಂದನ್ನು ತೆಗೆದುಕೊಂಡು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಅಸ್ವಸ್ಥನಾಗಿ ಬಿದ್ದಿದ್ದಾನೆ ಎನ್ನಲಾಗ್ತಿದೆ. ಇದನ್ನು ಕಂಡ ಸ್ಥಳೀಯರು ಯುವಕನ ತಂದೆಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಸ್ತ್ರಚಿಕಿತ್ಸೆ ಮೂಲಕ ತ್ರಿಶೂಲವನ್ನು ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.