ಮಂಗಳೂರು: ದ್ವೀಪ ರಾಷ್ಟ್ರ ಶ್ರೀಲಂಕಾದಿಂದ ನುಸುಳುಕೋರರ ಭೀತಿ; ಕರಾವಳಿ ಕಾವಲು ಪೊಲೀಸರಿಂದ ಎಚ್ಚರಿಕೆ
Thursday, May 12, 2022
ಮಂಗಳೂರು: ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ತಕ್ಷಣಕ್ಕೆ ಸಿಲುಕಿರುವ ಶ್ರೀಲಂಕಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ನುಸುಳಲು ಯತ್ನಿಸಿರುವುದನ್ನು ಭಾರತೀಯ ಬೇಹುಗಾರಿಕೆ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಠಾಣೆಯ ನಿರೀಕ್ಷಕರು ನುಸುಳುಕೋರರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಪರಿಣಾಮ ಅರಾಜಕತೆ ಸೃಷ್ಟಿಯಾಗಿದೆ. ಇದರ ಪರಿಣಾಮ ಜನತೆ ಆಹಾರ ಪದಾರ್ಥಗಳಿಗೆ ಪರದಾಡುತ್ತಿದ್ದು, ದೊಂಬಿ, ಕಲಹಗಳಿಂದ ತತ್ತರಿಸುತ್ತಿದ್ದಾರೆ. ಆದ್ದರಿಂದ ಅಲ್ಲಿನ ಪ್ರಜೆಗಳು ಸಮುದ್ರ ಮಾರ್ಗ ಮುಖೇನ ಇನ್ನಿತರ ಮಾರ್ಗಗಳ ಮೂಲಕ ಭಾರತದ ಕರಾವಳಿ ಭಾಗಕ್ಕೆ ನುಸುಳುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಅಪರಿಚಿತರಿಗೆ ಬಾಡಿಗೆ ಮನೆಕೊಡುವ ವೇಳೆ ಅವರ ಪೂರ್ವಾಪರ ಮಾಹಿತಿ ದಾಖಲೆಗಳನ್ನು ಪರಿಶೀಲನೆ ನಡೆಸಿಯೇ ಬಾಡಿಗೆ ನೀಡಬೇಕು. ಒಂದು ವೇಳೆ ನುಸುಳುಕೋರರೆಂದು ತಿಳಿದು ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.