ಬಂಟ್ವಾಳ: ಟಿವಿ ನೋಡದಿರು ಎಂದು ಬುದ್ಧಿವಾದ ಹೇಳಿರುವುದರಿಂದ ಮನನೊಂದ ಬಾಲಕ ನೇಣಿಗೆ ಶರಣು
Monday, May 9, 2022
ಬಂಟ್ವಾಳ: ಟಿವಿ ನೋಡದಿರು ಎಂದು ಬುದ್ಧಿವಾದ ಹೇಳಿರುವುದರಿಂದ ಮನನೊಂದ ಬಾಲಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಸಬಾ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬುವರ ಪುತ್ರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಬಾಲಕ.
ಬಾಲಕ ಸದ್ಯ 8ನೇ ತರಗತಿಯಿಂದ ಉತ್ತೀರ್ಣಗೊಂಡು ಬೇಸಿಗೆ ರಜೆಯ ಹಿನ್ನೆಲೆ ಮನೆಯಲ್ಲಿದ್ದ. ರವಿವಾರ ಬೆಳಗ್ಗೆ ಮನೆಯಲ್ಲಿ ಬಾಲಕ ಟಿವಿ ನೋಡುತ್ತಿದ್ದ. ಈ ಸಂದರ್ಭ ತಂದೆ ವಾಮನ ಪೂಜಾರಿಯವರು 'ಬೆಳಗ್ಗೆ ಬೆಳಗ್ಗೆ ಯಾಕೆ ಟಿವಿ ನೋಡುತ್ತಿ' ಎಂದು ಬುದ್ಧಿ ಮಾತು ಹೇಳಿದ್ದಾರೆ. ಅವರು ಟಿವಿ ಆಫ್ ಮಾಡಿ ಮನೆಯ ಅಂಗಳದಲ್ಲಿ ಕಟ್ಟಿಗೆ ಕೆಲಸಕ್ಕೆ ಹೋಗಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮಲಗುವ ಕೋಣೆಗೆ ಒಳಗಡೆಯಿಂದ ಚಿಲಕ ಹಾಕಿರುವುದನ್ನು ಗಮನಿಸಿದ ಆತನ ತಾಯಿ ಗಾಬರಿಗೊಂಡು ಪತಿಯನ್ನು ಕರೆದಿದ್ದಾರೆ.
ಆಗ ಬಂದ ಅವರು ಏನೇ ಮಾಡಿ ಕರೆದರೂ ಒಳಗಿನಿಂದ ಯಾವುದೇ ಪ್ರತ್ಯುತ್ತರ ಬಾರಲಿಲ್ಲ. ಆದ್ದರಿಂದ ಬಾಗಿಲನ್ನು ಒಡೆದು ನೋಡೊದಾಗ ಫ್ಯಾನಿಗೆ ಸೀರೆಯನ್ನು ಕಟ್ಟಿಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪುತ್ರ ಪತ್ತೆಯಾಗಿದ್ದಾನೆ. ತಕ್ಷಣ ಬಾಲಕನನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಕರೆತಂದರೂ ಆತ ಅದಾಗಲೇ ಮೃತಪಟ್ಟಿದ್ದ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.