ನೀಡಿರುವ ಸಾಲ ಮರಳಿ ಕೊಟ್ಟಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ
Wednesday, May 11, 2022
ಕೊಡಗು: ಕೊಟ್ಟಿರುವ ಸಾಲ ವಾಪಸ್ ನೀಡಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಸಮೀವುಲ್ಲಾ ಖಾನ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಸಮೀವುಲ್ಲಾ ಖಾನ್ ಅವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಸುಹಾನಾ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಬಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಮೀವುಲ್ಲಾ ಖಾನ್, ಕುಶಾಲನಗರದಲ್ಲಿ ಮೊಬೈಲ್ ಮಳಿಗೆಯನ್ನು ನಡೆಸುತ್ತಿದ್ದಾರೆ. ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅವರು ಕೊಟ್ಟ ಸಾಲ ಮರಳಿ ಕೊಡಲಿಲ್ಲವೆಂದು ಮನನೊಂದು ತಮ್ಮ ಸಾವಿಗೆ ಕಾರಣ ಯಾರೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಮೀವುಲ್ಲಾರ ಸಂಬಂಧಿಕರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.