ಮದುವೆ ಮಂಟಪದಲ್ಲಿಯೇ ಕಳಚಿಬಿದ್ದ ವರನ ವಿಗ್: ಮುರಿದುಬಿತ್ತು ವಿವಾಹ
Monday, May 23, 2022
ಉನ್ನಾವೋ (ಉತ್ತರ ಪ್ರದೇಶ): ಮದುವೆಯಾಗಲು ಇನ್ನೇನು ಕೆಲವೇ ಕ್ಷಣ ಇರುವಾಗ ಮಂಟಪದಲ್ಲಿಯೇ ವರನ ವಿಗ್ ಕಳಚಿ ಬಿದ್ದ ಪರಿಣಾಮ ವಿವಾಹವೇ ಮುರಿದು ಬಿದ್ದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರನ ಬೋಳು ತಲೆಯನ್ನು ನೋಡಿದ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ. ಈ ವಿಚಾರವನ್ನು ಮುಚ್ಚಿಟ್ಟು ಮದುವೆ ನಡೆಸಲು ಯತ್ನಿಸಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಧ್ಯ ಪ್ರವೇಶಿಸಿ ವಧು-ವರರ ಕಡೆಯವರನ್ನು ಮನವೊಲಿಸಿದ್ದಾರೆ. ಆದರೆ ವಿವಾಹ ಮಾತ್ರ ರದ್ದುಗೊಂಡಿತು.
ಸಾಕಷ್ಟು ಮನವೊಲಿಕೆಯ ಬಳಿಕವೂ ವಧುವಿನ ಕಡೆಯವರು ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ವರನು ಮದುವೆಯಾಗದೇ ಹಿಂದಿರುಗಬೇಕಾಯಿತು. ಮೇ 20 ರಂದು ವರನ ಕಡೆಯವರು ವಧುವಿನ ಮನೆಗೆ ಮೆರವಣಿಗೆ ಮೂಲಕ ಬಂದಿದ್ದರು. ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಜೈಮಾಲ್ ಕಾರ್ಯಕ್ರಮಕ್ಕೆ ವೇದಿಕೆಯನ್ನು ಅಣಿಗೊಳಿಸಲಾಗಿತ್ತು. ವಧೂ - ವರರು ವೇದಿಕೆಗೆ ಆಗಮಿಸಿದ್ದರು. ಇಬ್ಬರೂ ಒಬ್ಬರಿಗೊಬ್ಬರು ಹಾರವನ್ನೂ ಬದಲಾಯಿಸಿಕೊಂಡಿದ್ದರು.
ಇದಾದ ಬಳಿಕ ವಧುವಿನ ಸಹೋದರ ವರನ ಮುಖಕ್ಕೆ ನೀರನ್ನು ಎರಚಿದ್ದಾನೆ. ಆಗ ವರನ ತಲೆಯಿಂದ ವಿಗ್ ಕಳಚಿ ಬಿದ್ದಿದೆ. ಆಗ ಎಲ್ಲರಿಗೂ ವರನ ಬೋಳು ತಲೆ ಗೋಚರಿಸಿದ್ದು, ಇದನ್ನು ನೋಡಿದ ಎಲ್ಲರೂ ಶಾಕ್ ಗೊಳಗಿದ್ದಾರೆ. ಪರಿಣಾಮ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. ಮದುವೆಯ ವಿಚಾರವಾಗಿ ಎರಡೂ ಕಡೆಯವರ ನಡುವೆ ಸಾಕಷ್ಟು ಜಗಳ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ಇದುವರೆಗೆ ಯಾರ ಕಡೆಯಿಂದಲೂ ದೂರು ಬಂದಿಲ್ಲ, ದೂರು ಪಡೆದು ಕ್ರಮ ಕೈಗೊಳ್ಳಲಾಗುವುಘಟನೆಂದು ಕೋತ್ವಾಲಿ ಪ್ರಭಾರಿ ಚಂದ್ರಕಾಂತ್ ತಿಳಿಸಿದರು.