10 ರೂ. ನಾಣ್ಯಗಳ ಚಲಾವಣೆ ಜಾಗೃತಿಗಾಗಿ ಹೋಮಿಯೋಪತಿ ವೈದ್ಯ ಮಾಡಿದ್ದೇನು ಗೊತ್ತೇ?: ಕೇಳಿದ್ರೆ ನೀವೂ ಖಂಡಿತಾ ಆಶ್ಚರ್ಯ ಪಡ್ತೀರಾ
Tuesday, June 21, 2022
ಧರ್ಮಪುರಿ: 10 ರೂ. ನಾಣ್ಯವನ್ನು ಆರ್ ಬಿಐ ರಿಲೀಸ್ ಮಾಡಿದ್ದರೂ, ಅದೇಕೋ ಜನರು ಮಾತ್ರ 10 ರೂ. ನಾಣ್ಯ ಚಲಾವಣೆಯಲ್ಲಿಲ್ಲವೆಂದು ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಸಾರ್ವಜನಿಕರಲ್ಲಿ 10 ರೂ. ನಾಣ್ಯದ ಬಗ್ಗೆ ಜಾಗೃತಿ ಮೂಡಿಸಲು ತಮಿಳುನಾಡಿನ ವೈದ್ಯರೊಬ್ಬರು ಮಾಡಿರುವ ಕೆಲಸಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.
ತಮಿಳುನಾಡಿನ ಧರ್ಮಪುರಿಯ 27 ವರ್ಷದ ಹೋಮಿಯೋಪತಿ ವೈದ್ಯ ಡಾ.ಎ.ವೆಟ್ರಿವೆಲ್ ಎಂಬವರು 10 ರೂ. ನಾಣ್ಯವನ್ನು ಸಂಗ್ರಹಿಸುತ್ತಾ ಬಂದಿದ್ದಾರೆ. ಈ ಮೂಲಕ ಅವರು ಬರೋಬ್ಬರಿ 6ಲಕ್ಷ ರೂ. ಬೆಲೆಯ ಕಾರನ್ನು ಬರೀ 10 ರೂ. ನಾಣ್ಯಗಳನ್ನೇ ನೀಡಿ ಖರೀದಿಸಿದ್ದಾರೆ. ಈ ಮೂಲಕ ಅವರು 10 ರೂ. ನಾಣ್ಯಗಳ ಚಲಾವಣೆಯ ಬಗ್ಗೆ ಅರಿವು ಮೂಡಿಸಿದ್ದಾರೆ.
ತಾನು ಖರೀದಿಸುವ ಕಾರಿನ ಬೆಲೆ 12 ಲಕ್ಷ ರೂ. ಆಗುವುದಾದರೆ ಅಷ್ಟೂ ಮೊತ್ತದ 10 ರೂ. ನಾಣ್ಯಗಳನ್ನು ನೀಡಿ ಆ ಕಾರನ್ನು ಖರೀದಿಸುತ್ತಿದ್ದೆ ಎಂದು ಡಾ.ಎ.ವೆಟ್ರಿವೆಲ್ ಹೇಳಿಕೊಂಡಿದ್ದಾರೆ. ಅವರು ನಾಲ್ಕು ಚೀಲಗಳಲ್ಲಿ 10 ರೂ. ನಾಣ್ಯಗಳನ್ನು ತಂದು ಈ ಕಾರನ್ನು ಖರೀದಿಸಿದ್ದಾರೆ.
ಶಾಲೆಯೊಂದನ್ನು ನಡೆಸುತ್ತಿರುವ ಡಾ.ಎ.ವೆಟ್ರಿವೆಲ್ ಅವರು ತಮ್ಮ ವಿದ್ಯಾರ್ಥಿಗಳು 10 ರೂ. ನಾಣ್ಯಗಳನ್ನು ಇರಿಸಿಕೊಂಡು ಆಟವಾಡುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಇದು ಚಲಾವಣೆಯಲ್ಲಿದ್ದ ನಾಣ್ಯವೆಂದು ವಿದ್ಯಾರ್ಥಿಗಳು ಉತ್ತರಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಧರ್ಮಪುರಿಯಲ್ಲಿ ಯಾರೂ 10 ರೂ. ನಾಣ್ಯ ಖರೀದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಈ ಬಗ್ಗೆ ಅರಿವು ಮೂಡಿಸಲು ತಮ್ಮ ಬಳಿಯಿರುವ ನೋಟುಗಳನ್ನು ನೀಡಿ ಈ ನಾಣ್ಯಗಳನ್ನು ಸಂಗ್ರಹಿಸಿ ಕಾರು ಕೊಂಡಿದ್ದೇನೆ ಎಂದು ಹೇಳಿದ್ದಾರೆ.