ಮಂಗಳೂರು: ಮಳಲಿ ಮಸೀದಿ - ವಿಎಚ್ ಪಿ ವಿವಾದ ಪ್ರಕರಣ; ಜೂ.14ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ
Friday, June 10, 2022
ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕಟ್ಟಡ ಪತ್ತೆ ವಿಚಾರದಲ್ಲಿ ಮಸೀದಿ ಆಡಳಿತ ಮಂಡಳಿ ಹಾಗೂ ವಿಎಚ್ ಪಿ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಇಂದು ಕೂಡಾ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ವಾದವನ್ನು ಆಲಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು ಜೂ. 14ಕ್ಕೆ ಮುಂದೂಡಿದೆ.
ಮಳಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಇಂದು ವಾದ ಮಂಡಿಸಿದ್ದಾರೆ. ಮಳಲಿಯಲ್ಲಿರೋದು ಮಸೀದಿ ಎಂದು ಮತ್ತೆ ಸಾಬೀತು ಮಾಡುವ ಅಗತ್ಯವಿಲ್ಲ. ಸರ್ಕಾರಿ ವಕ್ಫ್ ದಾಖಲೆ ಪ್ರಕಾರ ಆ ಪ್ರದೇಶದಲ್ಲಿ ಮಸೀದಿ ಇರುವುದು ದಾಖಲಾಗಿದೆ. ವಕ್ಫ್ ಕಾನೂನಿನ ಪ್ರಕಾರ ಮಸೀದಿ ಎಂದರೆ ಪ್ರಾರ್ಥನಾ ಸ್ಥಳ. ಅಂಥಹ ಸ್ಥಳವನ್ನು ನಿಯಮಗಳ ಪ್ರಕಾರ ವಕ್ಫ್ ಆಸ್ತಿಯೆಂದು ಕರೆಯಲಾಗುತ್ತದೆ ಎಂದು ವಾದ ಮಂಡಿಸಿದ್ದಾರೆ.
ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದಿಂದ ನೋಟಿಫಿಕೇಶನ್ ಆಗಬೇಕು. ಆದರೆ ಮಳಲಿ ಮಸೀದಿ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಅಸಾಧ್ಯ. ಅಲ್ಲದೆ ಇದನ್ನು ಸ್ಮಾರಕವೋ ಅಲ್ಲವೋ ಎಂದು ಹೇಳಲು ಸಿವಿಲ್ ಕೋರ್ಟ್ ಗೆ ಅಧಿಕಾರ ಇಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿಯ ಪರ ವಕೀಲರು ವಾದ ಮಂಡಿಸಿದ್ದಾರೆ.
ವಾದವನ್ನು ಆಲಿಸಿದ ನ್ಯಾಯಾಧೀಶರು ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಅವರಿಗೆ ವಾದ ಮಂಡಿಸಲು ಜೂನ್ 14ಕ್ಕೆ ಅವಕಾಶ ನೀಡಿದ್ದಾರೆ. ಆದ್ದರಿಂದ ವಿಚಾರಣೆಯನ್ನು ಮುಂದೂಡಿ ಆದೇಶಿಸಿದ್ದಾರೆ.