ಉಡುಪಿ: ಅಪ್ರಾಪ್ತೆಯ ಅತ್ಯಾಚಾರ ಎಸಗಿದಾತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ!
Monday, June 27, 2022
ಉಡುಪಿ: ತೋಟದ ಮನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ 55ರ ವ್ಯಕ್ತಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ವಿಧಿಸಿ ಆದೇಶಿಸಿದೆ.
ಹಾವೇರಿ ಮೂಲದ ಹನುಮಂತ(55) ಶಿಕ್ಷೆಗೊಳಗಾದ ಅಪರಾಧಿ.
ಸಂತ್ರಸ್ತ ಬಾಲಕಿ ತನ್ನ ತಾಯಿಯೊಂದಿಗೆ ತೋಟದ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಅದೇ ತೋಟದಲ್ಲಿ ಹನುಮಂತ ಕೆಲಸ ಮಾಡುತ್ತಾ, ಅಲ್ಲೇ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಈತ 2021ರ ಸಮಯದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಬಾಲಕಿ ನೀಡಿರುವ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ಆರೋಪಿಯನ್ನು ಬಂಧಿಸಲಾಗಿತ್ತು.
ಆ ಬಳಿಕ ಪ್ರಕರಣದ ತನಿಖೆ ನಡೆಸಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ 18 ಮಂದಿ ಸಾಕ್ಷಿಗಳ ಪೈಕಿ 12 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿತ್ತು. ವೈದ್ಯಕೀಯ ಸಾಕ್ಷಿ, ನೊಂದ ಬಾಲಕಿ, ಇತರ ಸಾಕ್ಷಿಗಳನ್ನು ಹೇಳಿರುವ ಸಾಕ್ಷ್ಯಾಧಾರಗಳು ಅಭಿಯೋಜನೆಯ ಪರವಾಗಿತ್ತು.
ಆರೋಪಿ ಮೇಲಿನ ಆರೋಪ ಸಾಬೀತಾಗಿರುವ ಹಿನ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ 5 ಲಕ್ಷ ರೂ. ಪರಿಹಾರ ಒದಗಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಪೊಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ವಿಶೇಷ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದಾರೆ.