ಚಿಲಿ: 286 ಪಟ್ಟು ಅಧಿಕ ಸಂಬಳ ಬ್ಯಾಂಕ್ ಖಾತೆಗೆ ಜಮಾವಣೆಗೊಂಡ ಉದ್ಯೋಗಿ ರಾಜಿನಾಮೆ ನೀಡಿ ನಾಪತ್ತೆ!
Wednesday, June 29, 2022
ಚಿಲಿ: ಚಿಲಿ ದೇಶದ ಕಂಪೆನಿಂದು ಆಕಸ್ಮಿಕವಾಗಿ ಮಾಡಿರುವ ತಪ್ಪಿನಿಂದ ಈಗ ಪರಿತಪಿಸುವಂತಾಗಿದೆ. ನಿಜವಾಗಿಯೂ ಆದದ್ದೇನೆಂದರೆ ಈ ಕಂಪೆನಿಯು ತನ್ನ ಉದ್ಯೋಗಿಯೊಬ್ಬನಿಗೆ ಆತನ ವೇತನಕ್ಕಿಂತ 286 ಪಟ್ಟು ವೇತನ ನೀಡಿದೆ. ಅಂದರೆ ಸುಮಾರು 1.4 ಕೋಟಿ ರೂ.ನಷ್ಟು ಹಣ ನೀಡಿದೆ. ಇಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲ. ಇದೀಗ ಆ ನೌಕರ ಅಷ್ಟೂ ಹಣವನ್ನು ತನ್ನದಾಗಿಸಿಕೊಂಡು ನಾಪತ್ತೆಯಾಗಿದ್ದಾನೆ.
ಚಿಲಿ ದೇಶದ ಫುಡ್ ಇಂಡಸ್ಟ್ರಿಯಲ್ ಕನ್ಸಾರ್ಟಿಯಂನ ಮಾನವ ಸಂಪನ್ಮೂಲ ವಿಭಾಗದ ಉದ್ಯೋಗಿಗೆ ಕಂಪೆನಿಯು 500,000 ಚಿಲಿಯನ್ ಪಸೋಸ್ (43 ಸಾವಿರ ರೂ.) ನೀಡುವ ಬದಲು 165,398,851 ಚಿಲಿಯನ್ ಪಸೋಸ್ (1.42 ಕೋಟಿ ರೂ.) ಅನ್ನು ಆತನ ಖಾತೆಗೆ ವರ್ಗಾಯಿಸಿದೆ. ಇದನ್ನು ಗಮನಿಸಿದ ಈ ನೌಕರ ಮೇ 30ರಂದು ಕಂಪೆನಿಯ ವಿತರಣಾ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಗೆ ತನಗೆ 165.3 ಮಿಲಿಯನ್ ಪಸೋಸ್ ತಪ್ಪಾಗಿ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದ.
ಅದಕ್ಕೆ ಆತನಿಗೆ ಬ್ಯಾಂಕ್ ಗೆ ತೆರಳಿ ವೋಚರ್ ಪಡೆಯುವಂತೆ ಸೂಚನೆ ನೀಡಲಾಗಿತ್ತು. ಆದರೆ ಆತ ಮೂರು ದಿನಗಳ ಕಾಲ ನಾಪತ್ತೆಯಾಗಿದ್ದ. ಆ ಬಳಿಕ ಜೂನ್ 2ರಂದು ತನ್ನ ಲಾಯರ್ ನೊಂದಿಗೆ ಬಂದು ರಾಜಿನಾಮೆ ಪತ್ರ ನೀಡಿ ನಾಪತ್ತೆಯಾಗಿದ್ದಾನೆ. ಇದೀಗ ಆತನ ವಿರುದ್ಧ ಕಂಪೆನಿ ಕಾನೂನು ಕ್ರಮಕ್ಕೆ ಮುಂದಾಗಿದೆ.