ವಿದೇಶಿ ಎಫ್ ಬಿ ಗೆಳತಿಯಿಂದ ಬೆಂಗಳೂರು ವ್ಯಕ್ತಿಗೆ ನಂಬಿ 35 ಲಕ್ಷ ರೂ. ಪಂಗನಾಮ
Thursday, June 23, 2022
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯಗೊಂಡ ವಿದೇಶಿ ಗೆಳತಿಯನ್ನು ನಂಬಿ ಬೆಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 35 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಖಾಸಗಿ ಫೈನಾನ್ಸ್ ಯೂನಿಟ್ನಲ್ಲಿ ಮ್ಯಾನೇಜರ್ ಆಗಿರುವ ಬೆಂಗಳೂರಿನ 48 ವರ್ಷದ ಈ ವ್ಯಕ್ತಿ ಫೇಸ್‍ಬುಕ್ ಮೂಲಕ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ ಪರಿಚಯವಾಗಿದ್ದಾಳೆ. ಮೊದಲಿಗೆ ಆಕೆ ಇವರ ಫೇಸ್‍ಬುಕ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾಳೆ. ಬಳಿಕ ತಾನು ಇಂಗ್ಲೆಂಡಿನವಳು ಎಂದು ಪರಿಚಯಿಸಿ ಸ್ನೇಹ ಬೆಳೆಸಿದ್ದಾಳೆ.
ಪರಸ್ಪರ ಇಬ್ಬರೂ ಫೋನ್ ನಂಬರ್ ಅನ್ನು ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್, ಕಾಲ್ ಮಾಡಿದ್ದಾರೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಇಬ್ಬರು ಜೊತೆಯಾಗಿ ಬ್ಯುಸಿನೆಸ್ ಆರಂಭಿಸೋಣ ಎಂದು ನ್ಯಾನ್ಸಿ ಕೇಳಿಕೊಂಡಿದ್ದಾಳೆ. ಅಲ್ಲದೆ ಆಕೆ ತಾನು ಇಂಗ್ಲೆಂಡ್ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್ನಲ್ಲಿ ತೊಡಗುತ್ತೇನೆ ಎಂದು ನಂಬಿಸಿದ್ದಾಳೆ. ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳಿಕೊಂಡಿದ್ದಾಳೆ.
ನ್ಯಾನ್ಸಿ ಮಾತಿಗೆ ಮರುಳಾದ ಆ ವ್ಯಕ್ತಿ, ಹಂತ ಹಂತವಾಗಿ 35 ಲಕ್ಷ ರೂ. ಹಣವನ್ನು ಆಕೆಯ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಿದ್ದಾರೆ. ಅತ್ತ ಹಣ ತಲುಪುತ್ತಿದ್ದಂತೆ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿರುವ ನ್ಯಾನ್ಸಿ ವಿಲಿಯಂ, ನಾಪತ್ತೆಯಾಗಿದ್ದಾಳೆ.
ಫೇಸ್‌ಬುಕ್ ಗೆಳತಿಯ ಬಣ್ಣದ ಮಾತಿಗೆ ಮರುಳಾಗಿ ವಂಚನೆಗೊಳಗಾದ ವ್ಯಕ್ತಿ, ಇದೀಗ ಆಕೆಯ ವಿರುದ್ಧ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.