ಅಮೇರಿಕಾ: ಸ್ನೇಹಿತೆಯೊಂದಿಗೆ ಜಗಳವಾಡಿ 5 ಮಿಲಿಯನ್ ಡಾಲರ್ ಮೊತ್ತದ ಮ್ಯೂಸಿಯಂ ಕಲಾಕೃತಿಯನ್ನೇ ಧ್ವಂಸಗೈದ ಯುವಕ!
Wednesday, June 8, 2022
ನ್ಯೂಯಾರ್ಕ್: ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗೋದು ನೋಡಿ. ಇಲ್ಲೊಬ್ಬ ಯುವಕ ಸ್ನೇಹಿತೆಯೊಂದಿಗೆ ಜಗಳಗೈದು ಮಾಡಿರುವ ಎಡವಟ್ಟಿನಿಂದ 5 ಮಿಲಿಯನ್ ಡಾಲರ್ ಮೊತ್ತದ ಕಲಾಕೃತಿಯೇ ನಾಶವಾಗಿದೆ. ಇದೀಗ ಈ ಯುವಕ ಜೈಲು ಕಂಬಿ ಎಣಿಸುತ್ತಿದ್ದಾನೆ.
ಈ ಘಟನೆ ಅಮೇರಿಕಾದ ಡೆಲ್ಲಾಸ್ ಆರ್ಟ್ ಮ್ಯೂಸಿಯಂನಲ್ಲಿ ನಡೆದಿದೆ. ಬ್ರಿಯಾನ್ ಹರ್ನಾಂಡೆಸ್ ಎಂಬ 21 ವರ್ಷದ ಯುವಕ ಮತ್ತು ಆತನ ಗೆಳತಿಗೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿ ಜಗಳವಾಗಿದೆ. ಈತನ ಕೋಪ ಯಾವ ರೀತಿಯಲ್ಲಿ ಮಿತಿ ಮೀರಿತ್ತೆಂದರೆ, ಈತ ಡೆಲ್ಲಾಸ್ ಆರ್ಟ್ ಮ್ಯೂಸಿಯಂನ ಗಾಜನ್ನೇ ಕುರ್ಚಿಯಿಂದ ಒಡೆದು ಒಳ ನುಗ್ಗಿದ್ದಾನೆ. ಬಳಿಕ ಅಲ್ಲಿದ್ದ ಬಹಳ ಪುರಾತನ ಕಲಾಕೃತಿಗಳನ್ನು ಒಡೆದು ಹಾಕಿದ್ದಾನೆ.
ಇದರಲ್ಲಿ 2,500 ವರ್ಷಗಳ ಬಹಳ ಪುರಾತನ ಕಲಾಕೃತಿ, ಅಮೇರಿಕದ ಬುಡಕಟ್ಟು ಸಮುದಾಯದ ಕಲಾಕೃತಿ, ಪ್ರಾಚೀನ ಗ್ರೀಕ್ ಸಮುದಾಯದ ಲೋಟ, ಫೋನ್, ಕಂಪ್ಯೂಟರ್, ಬೆಂಚ್ ಗಳನ್ನು ಒಡೆದು ಹಾಕಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯೂಸಿಯಂಗೆ ಆಗಿರುವ ನಷ್ಟವನ್ನು ಭರಿಸಲು ವಿಮಾ ಸಂಸ್ಥೆಯ ಮೊರೆ ಹೋಗಲಾಗಿದೆ ಎಂದು ತಿಳಿದು ಬಂದಿದೆ.