ಆಟವಾಡುತ್ತಿದ್ದ 8ರ ಬಾಲಕ ಬಂದೂಕಿನಿಂದ ಹಾರಿಸಿದ ಗುಂಡಿಗೆ 1ವರ್ಷದ ಮಗು ಬಲಿ, ಜೀವನ್ಮರಣ ಸ್ಥಿತಿಯಲ್ಲಿ ಮತ್ತೊಂದು ಮಗು ಹೋರಾಟ
Tuesday, June 28, 2022
ಪೆನ್ಸಕೋಲಾ (ಅಮೆರಿಕ): ತಂದೆಯ ಗನ್ ನಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕ ಎರಡು ಪುಟ್ಟ ಕಂದಮ್ಮಗಳ ಮೇಲೆ ಗುಂಡು ಹಾರಿಸಿರುವ ದುರ್ಘಟನೆಯೊಂದು ಫ್ಲೋರಿಡಾದ ಮೋಟೆಲ್‌ನಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಒಂದು ವರ್ಷದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ, ಎರಡು ವರ್ಷದ ಮಗು ಆಸ್ಪತ್ರೆಯಲ್ಲಿ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.
ಈ ಬಾಲಕ ತನ್ನ ತಂದೆಯ ಸ್ನೇಹಿತೆಯ ಪುತ್ರಿಯರಾದ ಒಂದು ವರ್ಷ ಹಾಗೂ ಎರಡು ವರ್ಷದ ಹೆಣ್ಮಕ್ಕಳೊಂದಿಗೆ ಆಟವಾಡುತ್ತಿದ್ದ. ಬಾಲಕನ ತಂದೆ ತನ್ನ ರೂಂನಲ್ಲಿ ಬಂದೂಕನ್ನು ಇಟ್ಟಿದ್ದರು. ಇದನ್ನು ಗಮನಿಸಿದ ಬಾಲಕ ತಂದೆ ಕೊಠಡಿಯಿಂದ ಹೊರ ಹೋದ ಬಳಿಕ ಗನ್ ಅನ್ನು ಕೈಗೆತ್ತಿಕೊಂಡು ಪುಟ್ಟ ಕಂದಮ್ಮಗಳ ಜೊತೆ ಆಟವಾಡುತ್ತಿದ್ದ. ಅಷ್ಟೇ ಅಲ್ಲದೆ ಆ ಬಾಲಕ ಬಂದೂಕಿನಿಂದ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮ ಒಂದು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಎರಡು ವರ್ಷದ ಮಗುವಿಗೆ ಗುಂಡು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂದು ಎಸ್ಕಾಂಬಿಯಾ ಕೌಂಟಿ ಶೆರಿಫ್ ಚಿಪ್ ಸಿಮನ್ಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಾಲಕನ ತಂದೆ ಲೈಸೆನ್ಸ್ ಇಲ್ಲದ ಗನ್ ಹೊಂದಿರುವುದಲ್ಲದೇ ಅಪ್ರಾಪ್ತ ಹುಡುಗನ ಕೈಗೆ ಸಿಗುವ ರೀತಿಯಲ್ಲಿ ಗನ್ ಇಟ್ಟಿದ್ದರು. ಈ ಮೂಲಕ ಆತ ಎರಡು ಅಪರಾಧ ಎಸಗಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಆತ 41,000 ಡಾಲರ್ ಮೊತ್ತದ ಜಾಮೀನು ನೀಡಿ ಬಿಡುಗಡೆಯಾಗಿದ್ದಾರೆ. ಅತ್ತ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.