ಸಹೋದ್ಯೋಗಿ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಗ್ಯಾಂಗ್ ರೇಪ್ ಪ್ರಕರಣ: 8 ಮಂದಿ ಸಿಐಎಸ್ಎಫ್ ಕಾನ್ ಸ್ಟೇಬಲ್ ಗಳ ವಜಾ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್!
Wednesday, June 22, 2022
ಬೆಂಗಳೂರು: ಸಹೋದ್ಯೋಗಿಯ ಪತ್ನಿಯ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಸಿಐಎಸ್ಎಫ್ ಕಾನ್ ಸ್ಟೇಬಲ್ಗಳನ್ನು ಸೇವೆಯಿಂದ ವಜಾಗೊಳಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಆರೋಪಿತರು ಸಹೋದ್ಯೋಗಿಯ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ಸಿಐಎಸ್‌ಎಫ್‌ನ ಶಿಸ್ತು ಪ್ರಾಧಿಕಾರದ ವಜಾ ಆದೇಶದ ವಿರುದ್ಧ ಆರೋಪಿಗಳು ಹೈಕೋರ್ಟ್‌ನ ಮೊರೆ ಹೋಗಿದ್ದರು.
ಸಂತ್ರಸ್ತೆ 2015ರಲ್ಲಿ ದೂರು ದಾಖಲಿಸಿದ್ದರು. ಆಕೆ ನೀಡಿರುವ ದೂರಿನನ್ವಯ 'ಆರೋಪಿಗಳಲ್ಲಿ ಓರ್ವನು ತನ್ನೊಂದಿಗೆ ಸ್ನೇಹ ಬೆಳೆಸಿದ್ದ. ಬಳಿಕ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಇತರ ಆರೋಪಿಗಳು ಈ ವಿಚಾರವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆಯೊಡ್ಡಿ ಸಾಮೂಹಿಕ ಅತ್ಯಾಚಾರವೆಸಗಿದ್ದರು' ಎಂದು ದೂರಿದ್ದಳು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಐಎಸ್‌ಎಫ್ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು.
ಸಿಐಎಸ್ಎಫ್ ಕರ್ತವ್ಯದಲ್ಲಿ ಶಿಸ್ತು ಹಾಗೂ ನೈತಿಕತೆ ಬಹಳ ಮುಖ್ಯವಾದುದು. ಆರೋಪಿಗಳು ಮಾಡಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ನಡೆದಿರುವ ಕೃತ್ಯವು ಕರ್ತವ್ಯದ ಮೇಲೆ ಹೊರ ಹೋಗಿರುವ ಪತಿಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಿ ಪ್ರಾಧಿಕಾರವು ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. ಎಲ್ಲ ಆರೋಪಿಗಳನ್ನು ಸೇವೆಯಿಂದ ವಜಾಗೊಳಿಸಿರುವ ಪ್ರಾಧಿಕಾರ, ಆರೋಪಿಗಳ ಕೃತ್ಯದಿಂದ ಕುಟುಂಬವನ್ನು ಬಿಟ್ಟು ದೂರದೂರಿಗೆ ಕರ್ತವ್ಯಕ್ಕೆ ತೆರಳುವ ಇತರ ಸಿಬ್ಬಂದಿಗೂ ಅಭದ್ರತೆ ಕಾಡಲಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯವು ಎಲ್ಲಾ ಎಂಟು ಆರೋಪಿಗಳನ್ನು ಕ್ರಿಮಿನಲ್ ಆರೋಪಗಳಿಂದ ಖುಲಾಸೆಗೊಳಿಸಿದೆ. ಆದರೆ ಆದೇಶದ ಬಳಿಕ, ಸೇವೆಯಿಂದ ವಜಾವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕ್ರಿಮಿನಲ್ ಪ್ರಕರಣದಲ್ಲಿ ದಾಖಲಾದ ದೂರುದಾರೆಯ ಹೇಳಿಕೆಯಿಂದ ‘ಆಪಾದಿತ ಘಟನೆಗೆ ಆಕೆಯ ಒಪ್ಪಿಗೆ ನೀಡಿದ ಪಕ್ಷವಾಗಿರುವುದು ಸ್ಪಷ್ಟವಾಗಿದೆ’ ಎಂದು ವಾದಿಸಲಾಯಿತು. ಈ ರೀತಿಯ ಘಟನೆಗಳು ಪೊಲೀಸ್ ಪೇದೆಗಳ ನೈತಿಕತೆಯನ್ನು ಕುಸಿಯುವಂತೆ ಮಾಡುತ್ತದೆ ಮತ್ತು ಸಿಐಎಸ್‌ಎಫ್‌ನಿಂದ ವಜಾಗೊಳಿಸಿದ ಆದೇಶ ಸೂಕ್ತ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಇತ್ತೀಚೆಗೆ (ಜೂನ್ 15) ಆದೇಶ ನೀಡಿತು.