8 ಬಾಟಲಿ ಮದ್ಯದೊಂದಿಗೆ ನಿದ್ದೆ ಮಾತ್ರೆಗಳನ್ನು ಸೇವನೆ ಮಾಡಿ ಟಾಲಿವುಡ್ ಕಿರುತೆರೆ ನಟಿ ಆತ್ಮಹತ್ಯೆಗೆ ಯತ್ನ
Thursday, June 2, 2022
ಹೈದರಾಬಾದ್: 8 ಬಾಟಲಿ ಮದ್ಯದೊಂದಿಗೆ ನಿದ್ದೆ ಮಾತ್ರೆಗಳನ್ನು ಬೆರೆಸಿ ಸೇವನೆ ಮಾಡಿ ಟಾಲಿವುಡ್ನ ಕಿರುತೆರೆ ನಟಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡಿರುವ ನಟಿ ಮೈಥಿಲಿ ರೆಡ್ಡಿಯವರು ಇದೀಗ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮೈಥಿಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಯುತ್ತದೆ. ತಕ್ಷಣ ಹೈದರಾಬಾದ್ ನ ಪಂಜಗುಟ್ಟ ಠಾಣಾ ಪೊಲೀಸರು ಆಕೆಯ ಮನೆಗೆ ಧಾವಿಸಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವಲ್ಲೇ 8 ಮದ್ಯದ ಬಾಟಲ್ ಮತ್ತು ನಿದ್ದೆ ಮಾತ್ರೆಗಳು ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
8 ಬಾಟಲ್ ಮದ್ಯದೊಂದಿಗೆ ಆಕೆ ನಿದ್ದೆ ಮಾತ್ರೆ ಬೆರೆಸಿ ಕುಡಿದಿರುವುದು ಮನೆಯಲ್ಲಿ ಸಿಕ್ಕ ಸಾಕ್ಷಿಗಳಿಂದ ತಿಳಿದುಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಮೈಥಿಲಿಯನ್ನು ಸಮೀಪದ ಆಸ್ಪತ್ರೆಗೆ ಪೊಲೀಸರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಲ್ಲದೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ್ 27ರಂದು ನಟಿ ಮೈಥಿಲಿ ತಮ್ಮ ಪತಿ ಶ್ರೀಧರ್ ರೆಡ್ಡಿ ಹಾಗೂ ಇತರೆ ನಾಲ್ವರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕಿರುಕುಳದ ಆರೋಪ ಹೊರಿಸಿ ದೂರು ನೀಡಿದ್ದರು. ಪ್ರಕರಣದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದೆ. ಅದೇ ರೀತಿ ಮೈಥಿಲಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಸೂರ್ಯಪೇಟ್ ಜಿಲ್ಲೆಯ ಮೋತಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ.
ಈ ನಡುವೆ ಪತಿಯ ವಿರುದ್ಧ ಮೈಥಿಲಿ ಗಂಭೀರ ಆರೋಪ ಮಾಡಿ 'ಶ್ರೀಧರ್ ರೆಡ್ಡಿಗೆ ಮದುವೆಗೂ ಮುನ್ನ ರಜಿತಾ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರದಲ್ಲಿ ಪತಿ ಆಗಾಗ ತಮಗೆ ಕಿರುಕುಳ ನೀಡುತ್ತಿದ್ದಾರೆ. ತನಗೆ ಮೋಸ ಮಾಡಿರುವ ಪತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೈಥಿಲಿ ಆಗ್ರಹಿಸಿದ್ದಾರೆ. ನಮ್ಮದು ಅರೆಂಜ್ ಮ್ಯಾರೇಜ್. ಪತಿ ಶ್ರೀಧರ್ ರೆಡ್ಡಿ ಟಿವಿ ಕಾರ್ಯಕ್ರಮ ನಿರ್ದೇಶಕ. ನಮ್ಮಿಬ್ಬರಿಗೂ ಇದು ಎರಡನೇ ಮದುವೆ.
ಮದುವೆಗೂ ಮುನ್ನ ಒಳ್ಳೆಯವರಂತೆ ವರ್ತಿಸುತ್ತಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತನ್ನ ಬಣ್ಣ ಬದಲಾಯಿಸಿದ್ದಾರೆ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮನೆಯಿಂದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ರಜಿತಾ ಎಂಬಾಕೆಯನ್ನು ತನ್ನ ಸ್ನೇಹಿತೆ ಎಂದು ಹೇಳಿಕೊಂಡಿದ್ದ. ಆದರೆ, ಇಬ್ಬರ ನಡುವಿನ ಅಸಲಿ ಸಂಬಂಧ ನನಗೆ ಗೊತ್ತಾಯಿತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳಗಳು ಕೂಡ ನಡೆದಿವೆ. ನನಗೆ ಹಿಂಸೆ ನೀಡುತ್ತಿದ್ದ ಎಂದು ಮೈಥಿಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಂಜಗುಟ್ಟ ಠಾಣಾ ಪೊಲೀಸರು ನಟಿ ಮೈಥಿಲಿ ಆತ್ಮಹತ್ಯೆ ಯತ್ನಕ್ಕೆ ಆಕೆಯ ಪತಿ ಮತ್ತು ಆತನ ಕುಟುಂಬಕ್ಕೆ ನಂಟು ಇದೆಯೇ. ಆಕೆ ಈ ಕೃತ್ಯ ಎಸಗಲು ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.