ಮಂಗಳೂರು: ರಸ್ತೆ ಅಪಘಾತಕ್ಕೆ ಪ್ರತಿಭಾನ್ವಿತ ಕಲಾವಿದ ಬಲಿ!
Monday, June 13, 2022
ಮಂಗಳೂರು: ರಸ್ತೆ ಅಪಘಾತಕ್ಕೆ ಪ್ರತಿಭಾನ್ವಿತ ಕಲಾವಿದನೋರ್ವನು ಬಲಿಯಾದ ಘಟನೆ ಮಂಗಳೂರು - ಮೂಡುಬಿದಿರೆ ಹೆದ್ದಾರಿಯ ಕೈಕಂಬ ಬಳಿಯ ಕೊಯ್ಲ ಎಂಬಲ್ಲಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂಲತಃ ನಗರದ ಮುಲ್ಕಿಯ ಕೆರೆಕಾಡು ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ವಾಸವಾಗಿರುವ ಪ್ರವೀಣ್(36) ಮೃತಪಟ್ಟ ಯುವಕ.
ಪ್ರವೀಣ್ ಮೂಡುಬಿದಿರೆಯಿಂದ ಕೈಕಂಬಕ್ಕೆ ಬರುತ್ತಿದ್ದರು ಈ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಇವರ ಬೈಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಅಸುನೀಗಿದ್ದರು. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ಪ್ರವೀಣ್ ಪ್ರತಿಭಾನ್ವಿತ ಕಲಾವಿದರೂ ಹೌದು. ನವರಾತ್ರಿ, ಇನ್ನಿತರ ಕಾರ್ಯಕ್ರಮಗಳಲ್ಲಿ ಮೂಡುಬಿದಿರೆಯ ಕೀಲುಕುದುರೆ ತಂಡದಲ್ಲಿ ವೇಷ, ಹುಲಿವೇಷಗಳನ್ನು ಹಾಕುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.