ಅಧಿಕ ಬಡ್ಡಿದರ, ಇಎಂಐ ಹೊರೆಯಾಗುತ್ತಿದೆಯೇ...? ಇಲ್ಲಿದೆ ರಿಲೀಫ್ ನೀಡುವ ಟಿಪ್ಸ್
ಅಧಿಕ ಬಡ್ಡಿದರ, ಇಎಂಐ ಹೊರೆಯಾಗುತ್ತಿದೆಯೇ...? ಇಲ್ಲಿದೆ ರಿಲೀಫ್ ನೀಡುವ ಟಿಪ್ಸ್
ಕಳೆದ ಮೇ ತಿಂಗಳಿನಲ್ಲಿ ರೆಪೋ ದರ ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಿಸಲು RBI ಜೂನ್ ನಲ್ಲಿ ಮತ್ತೆ ರೆಪೋ ದರವನ್ನು 50 ಮೂಲಾಂಕ ಏರಿಸಿದೆ. ಈಗ ರೆಪೋ ದರ ಶೇ. 4.90ಗೆ ತಲುಪಿದೆ. ಇದರಿಂದಾಗಿ ರೆಪೋ ಆಧಾರಿತ ಸಾಲದ ಮೇಲಿನ ಬಡ್ಡಿದರ, ಅದರಲ್ಲೂ ಮುಖ್ಯವಾಗಿ ಗೃಹ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗಿದೆ.
RBI ಕೈಗೊಂಡ ಕ್ರಮದಿಂದಾಗಿ EMI ದರ ಹೆಚ್ಚಾಗಿದೆ. ಈಗ ಮತ್ತೆ ಅಧಿಕವಾಗಲಿದೆ ವಿವಿಧ ಬ್ಯಾಂಕ್‌ಗಳು ಹಣದ ಕೊರತೆ ಉಂಟಾದಾಗ RBIನಿಂದ ಹಣ ಪಡೆಯುತ್ತದೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಬ್ಯಾಂಕುಗಳು ತಮ್ಮ ಹೊರೆಯನ್ನು ಸಾಮಾನ್ಯವಾಗಿ ಗ್ರಾಹಕರ ಮೇಲೆ ವರ್ಗಾಯಿಸುತ್ತದೆ.
ಏರಿದ ರೆಪೋ ರೇಟ್ ದರ: EMI ಹೊರೆ ಅಧಿಕ ಸೇರಿ ವೈಯಕ್ತಿಕ ಹಣಕಾಸಿನ ಮೇಲೆ ಏನೆಲ್ಲ ಪ್ರಭಾವ?
ರೆಪೋ ರೇಟ್ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಮತ್ತೆ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಒಂದೆರಡು ಬ್ಯಾಂಕುಗಳು ಈಗಲೇ ಬಡ್ಡಿದರವನ್ನು ಹೆಚ್ಚಿಸಿದೆ.
ಸಾಲದ ಮೇಲಿನ ಬಡ್ಡಿದರ ಹೆಚ್ಚಾದರೆ ಗ್ರಾಹಕರು ಮಾಸಿಕವಾಗಿ ಕಟ್ಟಬೇಕಾದ EMI ಕೂಡಾ ಅಧಿಕವಾಗುತ್ತದೆ. EMI ಮೊತ್ತ ಪಾವತಿ ಗ್ರಾಹಕರಾದ ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರುವಾಗ ಕಿರಿಕಿರಿ ಸಹಜ. ಆದರೆ, ಕೆಲವು ಕ್ರಮಗಳನ್ನು ಕೈಗೊಂಡರೆ ಸ್ವಲ್ಪ ಮಟ್ಟಿಗೆ ರಿಲೀಫ್ ಆಗಬಹುದು. EMI ಕಡಿಮೆ ಮಾಡಲು ಕೆಲವು ಟಿಪ್ಸ್ ಇಲ್ಲಿದೆ.
ಕಡಿಮೆ ಬಡ್ಡಿದರ ಎಲ್ಲಿದೆ ಎಂದು ಪರಿಶೀಲಿಸಿ
ನೀವು ಈಗಾಗಲೆ ಗೃಹ ಸಾಲ ಹೊಂದಿದ್ದರೆ, ಅದು ಸಾಲದ ಬಡ್ಡಿದರ ಅಧಿಕವಾಗಿದ್ದರೆ ಎಲ್ಲಿ ಕಡಿಮೆ ಬಡ್ಡಿದರ ಇದೆ ಎಂದು ಪರಿಶೀಲಿಸಿ. ಎಲ್ಲ ಬ್ಯಾಂಕುಗಳು ಒಂದೇ ರೀತಿಯಾಗಿ ಬಡ್ಡಿದರವನ್ನು ವಿಧಿಸುವುದಿಲ್ಲ.
SBIನ ಬಡ್ಡಿದರಕ್ಕೂ HDFC ಬಡ್ಡಿದರಕ್ಕೂ ವ್ಯತ್ಯಾಸವಿದೆ. ನಿಮ್ಮ ಸಾಲದ ಬಡ್ಡಿದರವು ಅಧಿಕ ಆಗಿದ್ದರೆ, ಕಡಿಮೆ ಬಡ್ಡಿದರ ವಿಧಿಸುವ ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡಬಹುದು. ಕೆಲ ಬ್ಯಾಂಕ್‌ಗಳು ಯಾವುದೇ ದಂಡ ವಿಧಿಸದೆ ಸಾಲ ಮುಕ್ತಾಯ ಮಾಡುತ್ತವೆ. ಆದರೆ, ಪ್ರೋಸೆಸಿಂಗ್ ಫೀಸ್, ಲೀಗಲ್, ವ್ಯಾಲುವೇಷನ್ ಫೀಸ್ ಬಗ್ಗೆ ಗಮನ ನೀಡಿ.
ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿ
EMI ಅವಧಿಯನ್ನು ವಿಸ್ತರಣೆ ಮಾಡಿದಂತೆ ನಿಮ್ಮ ತಿಂಗಳ ಕಂತು ಕಡಿಮೆಯಾಗಲಿದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ಮಾಸಿಕ ಬಜೆಟ್ ನಿರ್ವಹಣೆ ಹಲವಾರು ಮಂದಿಗೆ ದೊಡ್ಡ ಸಂಕಷ್ಟವಾಗಿದೆ. ಹೀಗಿರುವಾಗ ನಿಮಗೆ ಮಾಸಿಕ EMI ಮೊತ್ತ ಅಧಿಕ ಎಂದಾದರೆ ನೀವು EMI ಪಾವತಿ ಅವಧಿಯನ್ನು ವಿಸ್ತರಣೆ ಮಾಡಬಹುದು.
ಕೆಲ ಬ್ಯಾಂಕ್‌ಗಳು 60 ವರ್ಷಕ್ಕಿಂತ ಕಡಿಮೆ ಪ್ರಾಯದ ಗ್ರಾಹಕರಿಗೆ ಸಾಲದ ಅವಧಿ ವಿಸ್ತರಣೆಗೆ ಅವಕಾಶ ನೀಡುತ್ತದೆ.
ಭಾಗಶಃ ಪಾವತಿ ಮಾಡಿದರೆ ಸೂಕ್ತ
ಸಾಲ ಪಡೆದಿದ್ದರೆ, ತಮ್ಮ ಸಾಲದ ಸ್ವಲ್ಪ ಅಸಲನ್ನು ಪ್ರೀ ಪೆಮೆಂಟ್ ಆಗಿ ಕಟ್ಟಬಹುದು. ಕೆಲವು ಬ್ಯಾಂಕುಗಳಲ್ಲಿ ಇದಕ್ಕೆ ಕೆಲವು ಷರತ್ತುಗಳು ಇರುತ್ತದೆ. HDFCಯಂತಹ ಕೆಲವು ಬ್ಯಾಂಕುಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ EMI ಆಧಾರದಲ್ಲೇ ಪಾವತಿ ಮಾಡಬೇಕಾಗುತ್ತದೆ.
ಈ ಅವಧಿ ಪೂರ್ಣಗೊಂಡ ಕೂಡಲೇ ನೀವು ನಿಮ್ಮಲ್ಲಿ ಇದ್ದ ಬೋನಸ್, ಇತರೆ ಯಾವುದೇ ಹಣವನ್ನು ಪಾವತಿಸಿ ಸಾಲದ ಹೊರೆಯನ್ನು ಒಮ್ಮೆಗೆ ಕೊಂಚ ಇಳಿಸಿಕೊಳ್ಳಿ.
ಇದರಿಂದಾಗಿ ಮಾಸಿಕ EMI ಮೊತ್ತ ಕಡಿಮೆಯಾಗುತ್ತದೆ. ನಿಮ್ಮಲ್ಲಿ ಅಧಿಕ ಸಾಲ ಇದ್ದರೆ, ನಿಮ್ಮಲ್ಲಿದ್ದ ಸಣ್ಣ ಪುಟ್ಟ ಉಳಿತಾಯವನ್ನು ಪರಿಶೀಲಿಸಿ, ಅದರ ಹಣವನ್ನು ಒಟ್ಟುಗೂಡಿಸಿ ಆ ಸಾಲವನ್ನು ಒಂದೇ ಬಾರಿ ಪಾವತಿಸಿ. ಆಗ ನೀವು ನೀಡಬೇಕಾದ ಸಾಲದ ಮೊತ್ತ ಕಡಿಮೆಯಾಗುತ್ತದೆ. ಸಾಲಕ್ಕೆ ವಿಧಿಸುವ ಬಡ್ಡಿಯೂ ಕಡಿಮೆ ಆಗಲಿದೆ. ಭಾಗಶಃ ಪಾವತಿ ಮಾಡುವ ಆಯ್ಕೆಯಿದ್ದರೆ ಅದನ್ನು ಆರಿಸಬಹುದು.
ಹೂಡಿಕೆ ಮಾಡುತ್ತಿದ್ದೀರಾ?, ಇಲ್ಲಿ ಗಮನಿಸಿ
ಸಾಲ ಹೊಂದಿರುವ ನೀವು ಬೇರೆಲ್ಲಾದರೂ ಹಣ ಹೂಡಿಕೆ ಮಾಡಿದ್ದೀರಾ... ಆ ಹೂಡಿಕೆಯಿಂದ ಎಷ್ಟು ಆದಾಯ/ರಿಟರ್ನ್ ಬರುತ್ತಿದೆ ಎಂಬುದನ್ನು ನೋಡಿ. ಅದು ನಿಮ್ಮ ಸಾಲದ ಬಡ್ಡಿಗಿಂತ ತೀರಾ ಕಡಿಮೆ ಇದರೆ, ಆಗ ಆ ಹೂಡಿಕೆಯನ್ನು ವಾಪಸ್ ಪಡೆದು ಸಾಲವನ್ನು ಮರುಪಾವತಿಸಿ. ಆಗ, ನಿಮ್ಮ EMI ಹೊರೆ ಕಡಿಮೆಯಾಗುವುದು.
ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ...
ಇನ್ನೊಂದು ಹೊಸ ಸಾಲಕ್ಕೆ ನೀವು ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಎಂದು ಎರಡೆರಡು ಬಾರಿ ಚಿಂತಿಸಿ. ಆ ಸಾಲವನ್ನು ಮರುಪಾವತಿ ಮಾಡಲು ನೀವು ಶಕ್ತರಾಗಿದ್ದರೆ ಮಾತ್ರ ಆ ದಾರಿಯನ್ನು ಆರಿಸಿಕೊಳ್ಳಿ.
ಸಾಲದ ಬಡ್ಡಿದರ ಇನ್ನಷ್ಟು ಹೆಚ್ಚಳವಾದರೆ ನಿಮಗಿದು ಖಂಡಿತ ಸಂಕಷ್ಟ. ಹಾಗಾಗಿ, ತೀರಾ ಅಗತ್ಯ ಇದ್ದರೆ ಮಾತ್ರ ಅಥವಾ ಅನ್ಯ ದಾರಿ ಇಲ್ಲ ಎಂದಾದರೆ ಮಾತ್ರ ಸಾಲವನ್ನು ಪಡೆದುಕೊಳ್ಳಿ. ಇಲ್ಲವಾದರೆ ಚಿನ್ನ ಅಡವಿಟ್ಟು ಸಾಲ ಪಡೆಯುವ ಆಯ್ಕೆ ಮಾಡಬಹುದು. ಇತರ ಸಾಲಕ್ಕಿಂತ ಕೊಂಚ ಕಡಿಮೆ ಬಡ್ಡಿದರದ ಸಾಲವಾಗಿದೆ.
ಅನ್ಯ ಸಾಲ ಇದ್ದರೆ ತಕ್ಷಣ ಆ ಸಾಲ ಮರುಪಾವತಿಗೆ ಆದ್ಯತೆ ನೀಡಿ. ಆ ನಂತರವೇ ಬಳಿಕ ಬೇರೆ ಸಾಲದ ಆಲೋಚನೆ ಮಾಡಿ.