ಇಂದು ಎಲ್ಲದರಲ್ಲೂ ಬದಲಾವಣೆ, ಪಾಶ್ಚಿಮಾತ್ಯಕರಣ, ವಾಣಿಜ್ಯಕರಣವಾಗುತ್ತಿರುವುದು ವಿಷಾದನೀಯ: ವಿಶ್ವೇಶ್ವರ ಹೆಗಡೆ ಕಾಗೇರಿ
Saturday, June 4, 2022
ಮಂಗಳೂರು: ಇಂದು ಜನತೆ, ಕುಟುಂಬ ಜೀವನ, ಸಮಾಜ ಎಲ್ಲದರಲ್ಲೂ ಬದಲಾವಣೆ ಆಗುತ್ತಿರುವುದು ಖೇದಕರ. ಸುಶಿಕ್ಷಿತರೂ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳು, ಕೋರ್ಟ್ ಗಳು, ಪೊಲೀಸ್ ಠಾಣೆಗಳು ಅಧಿಕವಾಗುತ್ತದೆ. ಸುಶಿಕ್ಷಿತರೂ ದುರ್ವ್ಯಸನಗಳಿಗೆ ಬಲಿಯಾಗುತ್ತಿದ್ದು, ಎಲ್ಲವೂ ಪಾಶ್ಚಿಮಾತ್ಯಕರಣ, ವಾಣೀಜ್ಯೀಕರಣ ಆಗುತ್ತಿದೆ ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.
ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಮೃತ ಸಂಗಮ ಹಾಗೂ ರಾಜ್ಯ ಮಟ್ಟದ ಸಾಧು - ಭಕ್ತ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,
ರಾಮಕೃಷ್ಣ ಆಶ್ರಮ ಮತ್ತು ಮಠ ಕಳೆದ 175 ವರ್ಷಗಳಲ್ಲಿ ಅದ್ಭುತವಾದ ಪರಿವರ್ತನೆಯ ಕೆಲಸಗಳನ್ನು ಮಾಡಿದೆ. ಮಂಗಳೂರಿನ ಮಠವೂ ಕಳೆದ 75 ವರ್ಷಗಳಲ್ಲಿ ಅನೇಕ ಅತ್ಯುತ್ತಮ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ರಾಜ್ಯಕ್ಕೆ ಮಾದರಿಯಾಗಿರುವ ಸ್ವಚ್ಛತಾ ಆಂದೋಲನವನ್ನು ನಡೆಸಿ ಸರ್ಕಾರದಿಂದ ಪ್ರಶಸ್ತಿಯನ್ನೂ ಪಡೆದಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರು ಯಾವ ಕನಸನ್ನಿಟ್ಟುಕೊಂಡು ರಾಮಕೃಷ್ಣ ಮಠವನ್ನು ಸ್ಥಾಪಿಸಿದರೋ, ಅದಕ್ಕೆ ಯಾವುದೇ ಚ್ಯುತಿ ಬಾರದಂತೆ ಮಠದ ಯತಿ ಪರಂಪರೆ ರಾಮಕೃಷ್ಣ ಮಠವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಛತ್ರಪತಿ ಶಿವಾಜಿ ಹಾಗೂ ಸ್ವಾಮಿ ವಿವೇಕಾನಂದರು ನಮ್ಮ ಭಾರತದ ಧರ್ಮ, ಸಂಸ್ಕೃತಿಯನ್ನು ಜಗತ್ತಿನಲ್ಲಿ ತಲೆ ಎತ್ತುವಂತೆ ಮಾಡಿದವರು. ಅವರ ಪರಿಕಲ್ಪನೆಯ ಭವ್ಯ ನಾಡನ್ನು ಕಟ್ಟಿ, ಭಾರತವನ್ನು ಜಗದ್ಗುರುವಾಗಿ ರೂಪಿಸೋಣ ಎಂದು ಕಾಗೇರಿ ಹೇಳಿದರು.
ನಾಡಿನ ಬೇರೆ ಮಠಗಳೂ ರಾಮಕೃಷ್ಣ ಮಠದ ರೀತಿಯಲ್ಲಿ ನಡೆದುಕೊಂಡಲ್ಲಿ ಸಮಾಜದಲ್ಲಿ ಉತ್ತಮ ಪರಿವರ್ತನೆ ಸಾಧ್ಯವಾಗಬಹುದು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾವು ಸನಾತನ ಧರ್ಮಕ್ಕೆ ಸೇರಿರುವ ಹಿಂದೂಗಳು ಎಂದು ಹೇಳುವ ಹೆಮ್ಮೆಯ ವಾತಾವರಣ ಸೃಷ್ಟಿಯಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಆಶೀರ್ವಚನ ನೀಡಿದ ಪಶ್ಚಿಮ ಬಂಗಾಳ ಬೇಲೂರಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರು, ಸರ್ವಧರ್ಮಗಳ ಸಮಭಾವದಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ. ಸ್ವಾಮಿ ವಿವೇಕಾನಂದರು ವೇದ ವಿದ್ಯಾಲಯವನ್ನು ಪ್ರಾರಂಭ ಮಾಡಿ ಸರ್ವ ಸಮುದಾಯಕ್ಕೆ ವೇದಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ವೇದಾಧ್ಯಯನದಿಂದ ಮೂಢನಂಬಿಕೆ ದೂರ ಮಾಡಬಹುದು ಎಂದು ನಂಬಿರುವ ಅವರು ಈ ಮೂಲಕ ಋಷಿ ಸಂಸ್ಕೃತಿಗೂ ಪ್ರಚಾರ ನೀಡಿದರು. ಕರ್ಮ, ಧರ್ಮದ ಮೂಲಕ ದೇವರನ್ನು ಕಾಣಲು ಸಾಧ್ಯವಿದೆ ಎಂದರು.
ಪಶ್ಚಿಮ ಬಂಗಾಳ ಬೇಲೂರು ರಾಮಕೃಷ್ಣ ಮಠದ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಆಶೀರ್ವಚನ ನೀಡಿ ಮಾತನಾಡಿ, ಸ್ವಚ್ಛ ಭಾರತ ಕಾರ್ಯಕ್ರಮದ ಮೂಲಕ ಮಂಗಳೂರಿನ ಜನಸಾಮಾನ್ಯರನ್ನು ಮಠದ ಕಡೆಗೆ ಬರಮಾಡಿಕೊಂಡು, ಈ ಕಾರ್ಯಕ್ರಮ ಪರಿಪೂರ್ಣವಾಗಿ ನಡೆಸಿದ ಹೆಗ್ಗಳಿಕೆ ರಾಮಕೃಷ್ಣ ಮಠಕ್ಕೆ ಸಲ್ಲುತ್ತದೆ ಎಂದರು.
ಆಶೀರ್ವಚನ ನೀಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಆರಂಭದಿಂದ ಇದುವರೆಗೆ ೫೦ಕ್ಕೂ ಹೆಚ್ಚು ಮಂದಿ ಸನ್ಯಾಸಿಗಳು ಈ ಮಠವನ್ನು ಮುನ್ನಡೆಸಿದ್ದಾರೆ. ಮಠದ ಸೇವಾ ಚಟುವಟಿಕೆ, ಅಮೃತಮಹೋತ್ಸವ ಯಶಸ್ವಿಯಾಗಲು ಮಠದ ಎಲ್ಲ ಸ್ವಾಮೀಜಿಗಳು, ಭಕ್ತರು, ಸ್ವಯಂಸೇವಕರ ಸಹಕಾರ ಕಾರಣ ಎಂದರು.
ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಠದ ಮುಂದಿನ ಎಲ್ಲ ಕೆಲಸಗಳಿಗೆ ರಾಜ್ಯ ಸರಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ರಾಮಕೃಷ್ಣ ಮಠ ಯುವಜನತೆಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರನ್ನು ಸಂಪತ್ತನ್ನಾಗಿ ರೂಪಿಸುತ್ತಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ, ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ದ.ಕ. ಜಿಪಂ ಸಿಇಒ ಡಾ. ಕುಮಾರ್ ಇದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು. ಉಪನ್ಯಾಸಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.