ಮಂಗಳೂರಿನಲ್ಲಿ ಬೆಳ್ಳಂಬೆಳಗೆ ಪೊಲೀಸರ ಗುಂಡಿನ ದಾಳಿ- ಇಬ್ಬರು ಆರೋಪಿಗಳು, ಮೂವರು ಪೊಲೀಸರು ಆಸ್ಪತ್ರೆಗೆ ದಾಖಲು
Saturday, June 11, 2022
ಮಂಗಳೂರು: ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿಗಳಿಬ್ಬರಿಗೆ ಕಾಲಿಗೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.
ಅರ್ಜುನ್ ಮೂಡುಶೆಡ್ಡೆ ಹಾಗೂ ಮನೋಜ್ ಅಲಿಯಾಸ್ ಬಿಂದಾಸ್ ಮನೋಜ್ ಗುಂಡಿನ ದಾಳಿಗೊಳಗಾದ ಆರೋಪಿಗಳು.
ಕೊಲೆ ಪ್ರಕರಣವೊಂದರ ಆರೋಪಿಗಳ ಪೈಕಿ ಇಬ್ಬರನ್ನು ಮುಲ್ಕಿಯ ಗ್ಲೋಬಲ್ ಹೆರಿಟೇಜ್ ಲೇಔಟ್ ನಲ್ಲಿ ಬಂಧಿಸಲು ಪೊಲೀಸರು ಹೋಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿಯಾದ ಪಿಎಸ್ಐ ನಾಗೇಂದ್ರ, ಎಎಸ್ಐ ಡೇವಿಡ್ ಹಾಗೂ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸುಧೀರ್ ಪೂಜಾರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗಲೂ ಶರಣಾಗದ ಆರೋಪಿಗಳ ಮೇಲೆ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಪರಿಣಾಮ ಇಬ್ಬರೂ ಗಾಯಗೊಂಡಿದ್ದಾರೆ.
ಇದೀಗ ಆರೋಪಿಗಳನ್ನು ಮತ್ತು ಹಲ್ಲೆಯಿಂದ ಗಾಯಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಶ್ರೀನಿವಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.