ಅಯೋಧ್ಯೆ: ಸರಯೂ ನದಿಯಲ್ಲಿ ಪತ್ನಿಗೆ ಮುತ್ತಿಟ್ಟ ಪತಿಗೆ ಗುಂಪಿನಿಂದ ಹಲ್ಲೆ!
Thursday, June 23, 2022
ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯ ದಂಡೆಯ ಘಾಟ್‌ಗಳ ಸರಣಿ ರಾಮ್ ಕಿ ಪೈಡಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕವಾಗಿಯೇ ಪತ್ನಿಗೆ ಮುತ್ತಿಟ್ಟ ಪತಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಸುತ್ತಮುತ್ತ ಜನರಿದ್ದ ಘಾಟ್ನಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಪತಿ ತನ್ನ ಪತ್ನಿಯನ್ನು ಚುಂಬಿಸಿದ್ದಾನೆ. ಇದನ್ನು ನೋಡಿದಾತ ಆತನನ್ನು ಎಳೆದು ಹೊಡೆಯಲು ಆರಂಭಿಸುತ್ತಾನೆ. ಈ ವೇಳೆ ಅಲ್ಲಿದ್ದ ಜನರೆಲ್ಲಾ ಪತಿಯ ಮೇಲೆ ಹಲ್ಲೆ ಮಾಡಲಾರಂಭಿಸುತ್ತಾರೆ. ತನ್ನ ಪತಿಯ ಮೇಲೆ ಹಲ್ಲೆ ಮಾಡದಂತೆ ಪತ್ನಿ ತಡೆಯಲು ಯತ್ನಿಸುತ್ತಾಳೆ.
ಬಳಿಕ ಇಬ್ಬರನ್ನು ನೀರಿನಿಂದ ಹೊರಗೆಳೆದು ಮಹಿಳೆಯ ಪತಿಯನ್ನು ಸುತ್ತುವರಿದು ಹಲ್ಲೆ ಮಾಡುತ್ತಾರೆ. ಇದಿಷ್ಟು ವೀಡಿಯೋದಲ್ಲಿ ದಾಖಲಾಗಿದೆ. ಅಯೋಧ್ಯೆಯಲ್ಲಿ ಈ ಅಸಭ್ಯತೆಯನ್ನು ಸಹಿಸಲಾಗುವುದಿಲ್ಲ ಎಂದು ಕೋಪಗೊಂಡ ಗುಂಪಿನ ಯುವಕ ಹೇಳಿರುವುದು ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಅಶೋಕ್ ಸ್ವೈನ್ ಎಂಬುವರು ಶೇರ್ ಮಾಡಿದ್ದಾರೆ. ಈ ವ್ಯಕ್ತಿ ತನ್ನ ಹೆಂಡತಿಗೆ ಮುತ್ತು ನೀಡಿ ತಪ್ಪು ಮಾಡಿಬಿಟ್ಟ. ಅಯೋಧ್ಯೆಯಲ್ಲಿರುವ ರಾಮಭಕ್ತರು ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ವ್ಯಕ್ತಿಯನ್ನು ಥಳಿಸಿದ್ದಾರೆ, ಮುತ್ತಿಡುವುದು ಭಾರತೀಯ ಸಂಸ್ಕೃತಿಯಲ್ಲವಂತೆ. ಆದರೆ, ಗುಂಪು ಹಲ್ಲೆ ಸಂಸ್ಕೃತಿಯಲ್ಲಿ ಒಂದಂತೆ ಎಂದು ಅಶೋಕ್ ಸ್ವೈನ್ ಎಂಬುವರು ಟೀಕಿಸಿದ್ದಾರೆ.
ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ಈಗಾಗಲೇ 1 ಮಿಲಿಯನ್ಗೂ ಅಧಿಕ ಮಂದಿ ವೀಡಿಯೋವನ್ನು ವೀಕ್ಷಿಸಿದ್ದಾರೆ. ವೀಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಘಟನೆಯ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ, 'ಈ ವೀಡಿಯೋ ಒಂದು ವಾರ ಹಳೆಯದಾಗಿದೆ. ನಮಗೆ ಈ ವಿಚಾರದಲ್ಲಿ ಯಾವುದೇ ದೂರುಗಳು ಬಂದಿಲ್ಲ. ಈಗ ದಂಪತಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಲು ಬಯಸಿದರೆ ಅವರು ದೂರು ದಾಖಲಿಸಬಹುದು ಎಂದು ಹೇಳಿದ್ದಾರೆ.
This man did a ‘mistake’ of kissing his wife - Ram Bhakts in Ayodhya misbehaved with his wife and beat up the man! Kissing is not Indian culture, but lynching has become one. pic.twitter.com/GHKXTbBNLP
— Ashok Swain (@ashoswai) June 22, 2022