ಮುರುಡೇಶ್ವರ ಬೀಚ್ ನಲ್ಲಿ ಇಬ್ಬರು ಸಮುದ್ರಪಾಲು
Friday, June 10, 2022
ಮಂಗಳೂರು: ಕರಾವಳಿಯ ಪ್ರಸಿದ್ಧ ಪ್ರವಾಸಿತಾಣ ಮುರುಡೇಶ್ವರ ಬೀಚ್ ನಲ್ಲಿ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಿವಾಸಿ ಅಬ್ರಾರ್ ಶೇಖ್(21) ಹಾಗೂ ಶಿವಮೊಗ್ಗ ಜಿಲ್ಲೆಯ ಆಗುಂಬೆ ನಿವಾಸಿ ಸುಶಾಂತ್ ಎಂ.ಎಸ್.(23) ಸಮುದ್ರಪಾಲಾಗಿರುವ ಯುವಕರು.
ಕೋಲಾರ ಶ್ರೀನಿವಾಸ ಪುರದಿಂದ 12 ಮಂದಿ ಯುವಕರು ಗುರುವಾರ ಸಂಜೆ ವೇಳೆಗೆ ಮುರುಡೇಶ್ವರ ಬೀಚ್ ನಲ್ಲಿ ಈಜಾಡುತ್ತಿದ್ದರು. ಈ ವೇಳೆ ಬೃಹತ್ ಗಾತ್ರದ ಅಲೆಯೊಂದು ಬಂದು ಮೂವರನ್ನು ಸೆಳೆದೊಯ್ದಿದೆ. ಅವರಲ್ಲಿ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಅಬ್ರಾರ್ ಶೇಖ್ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ.
ಅದೇ ರೀತಿ ಆಗುಂಬೆಯ ಒಂದೇ ಕುಟುಂಬದ ಮೂವರು ಮುರುಡೇಶ್ವರ ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ಸಂದರ್ಭ ಸುಶಾಂತ್ ಎಂ.ಎಸ್. ಹಾಗೂ ಅವರ ಚಿಕ್ಕಪ್ಪ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ. ತಕ್ಷಣ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ಸುಶಾಂತ್ ಚಿಕ್ಕಪ್ಪರನ್ನು ರಕ್ಷಿಸಲಾಗಿದೆ. ಆದರೆ ಸುಶಾಂತ್ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.