ಹಿಂದೂ ರಾಷ್ಟ್ರ, ಹಿಂದುತ್ವವೆಂದು ಹೇಳಿ ಗಲಾಟೆ ಮಾಡುವವರು ಹಿಜಾಬ್ ವಿಚಾರದಲ್ಲಿ ಸಂವಿಧಾನಾತ್ಮಕ ಕಾನೂನು ಹೋರಾಟ ಮಾಡಲಿ: ಬಿ.ಕೆ.ಹರಿಪ್ರಸಾದ್ ಸವಾಲು
Tuesday, June 7, 2022
ಮಂಗಳೂರು: ಹಿಜಾಬ್ ವಿಚಾರದಲ್ಲಿ ಕೋರ್ಟ್ ಸ್ಪಷ್ಟವಾದ ತೀರ್ಮಾನ ನೀಡಿದೆ. ಅದನ್ನು ಅನುಷ್ಠಾನಕ್ಕೆ ತಂದು ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಹೋರಾಟ ನಡೆಸಲಿ. ಉಡುಪಿಯ ಹಿಜಾಬ್ ವಿವಾದದ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಿದ್ದಾರೆ. ಆದರೆ ಹಿಂದೂ ರಾಷ್ಟ್ರ, ಹಿಂದುತ್ವ ಎಂದು ಹೇಳುತ್ತಾ ಗಲಾಟೆ ಮಾಡುವವರಿಗೆ ಕೋರ್ಟ್ ಗೆ ಹೋಗುವಷ್ಟು ಯೋಗ್ಯತೆಯಿಲ್ಲ. ಆದ್ದರಿಂದ ಇವರೂ ಸಂವಿಧಾನಿಕವಾಗಿ ಕೋರ್ಟ್ ನಲ್ಲಿ ಹೋರಾಟ ಮಾಡಲು ಕಲಿಯಲಿ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಂವಿಧಾನಿಕ ಹೋರಾಟ ಮಾಡುವುದು ಬಿಟ್ಟು ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಅಡ್ಡ ಹಾಕುವುದು ಸರಿಯಲ್ಲ. ಅದು ರಣಹೇಡಿಗಳು ಮಾಡುವ ಕೆಲಸವೇ ಹೊರತು ಯಾರೂ ವೀರಾಧಿವೀರರು ಮಾಡುವ ಕೆಲಸವಲ್ಲ. ಉಡುಪಿಯ ವಿದ್ಯಾರ್ಥಿನಿಯರಿಗೆ ನಾನು ಸೆಲ್ಯೂಟ್ ಹೇಳ್ತೇನೆ. ತಮ್ಮ ಹಕ್ಕಿಗಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ವಿಚಾರವಾಗಿ ಗಲಾಟೆ ಎಬ್ಬಿಸಿದವರು ಬಿಜೆಪಿ ಹಾಗೂ ಸಂಘಪರಿವಾರದವರು. ವಿದ್ಯಾರ್ಥಿಗಳಿಗೆ ಇಂತಹ ವಿಷಬೀಜ ಬಿತ್ತಿರೋದರಿಂದಲೇ ದ.ಕ.ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿಯಲ್ಲಿ ಫಲಿತಾಂಶ 20ನೇ ಸ್ಥಾನಕ್ಕೆ ಕುಸಿದಿದೆ. ಈ ದೇಶದಲ್ಲಿ ವಿವಿಧ ಧರ್ಮಗಳ ಸಂಪ್ರದಾಯಗಳಿವೆ. ಎಲ್ಲವನ್ನೂ ಪಾಲಿಸುತ್ತಾ ಹೋದಲ್ಲಿ ಹುಚ್ಚರಾಗುತ್ತಾರೆ ಎಂದರು.
ಭೂಸುಧಾರಣೆಯಲ್ಲಿ ಅನುಕೂಲ ಪಡೆದಿರುವ ಸಮುದಾಯ ಬಿಜೆಪಿ ಕಡೆಗೆ ವಾಲಿದೆ ಎಂದರೆ ಕಾಂಗ್ರೆಸ್ ನಲ್ಲಿ ನ್ಯೂನ್ಯತೆಗಳಿವೆ ಎಂದೆನಿಸುತ್ತದೆ. ಬಿಜೆಪಿಯ ನಕಲಿ ದೇಶಭಕ್ತರು ಜನರಲ್ಲಿ ವಿಷಬೀಜವನ್ನು ಬಿತ್ತಿ ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಅದನ್ನೆಲ್ಲಾ ಸರಿಪಡಿಸಬೇಕೆಂದು ದ.ಕ.ಜಿಲ್ಲೆಗೆ ನಾನು ಹೆಚ್ಚಿನ ಸಮಯವನ್ನು ನೀಡಬೇಕಿದೆ ಎಂದ ಬಿ.ಕೆ.ಹರಿಪ್ರಸಾದ್ ಅವರು ದ.ಕ.ಜಿಲ್ಲಾ ಸಂಸತ್ ಸದಸ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಚಿಂತನಸಭೆ ಮಾಡಿದ್ದು, ಪಕ್ಷದ ಬಗ್ಗೆ ಆಳವಾದ ಚರ್ಚೆಯಾಗಿದೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಹುರಿದುಂಬಿಸಬೇಕೆಂದು ಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರು ಸೇರಿ ಮಾಡಲಿದ್ದಾರೆ. ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಭದ್ರವಾಗಲಿದೆ. ನಾವೇನು ಇಲ್ಲಿ ಠೇವಣಿ ಕಳೆದುಕೊಂಡಿಲ್ಲ. ಸೋಲು - ಗೆಲುವು ಸಾಮಾನ್ಯ. ಬಿಜೆಪಿ ಚುನಾವಣೆ, ಓಟಿಗೋಸ್ಕರ ಜನರನ್ನು ಯಾವ ರೀತಿ ತಪ್ಪುದಾರಿಗೆ ಎಳೆಯುತ್ತಾರೆ ಎಂಬುದನ್ನು ತಿಳಿಸಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡಬೇಕು. ಅದರಲ್ಲಿ ನಾನೂ ಕೂಡಾ ಮುಂದೆ ಇದ್ದೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು, ಅಬ್ಬಕ್ಕ ರಾಣಿ ವಿಚಾರವನ್ನು ಕೈಬಿಟ್ಟ ಮೇಲೆ ಜನತೆಗೆ ಬಿಸಿ ತಟ್ಟಿದೆ. ಬಿಜೆಪಿಗರು ತಮ್ಮ ಸ್ವಾರ್ಥಕ್ಕೋಸ್ಕರ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ. ಗುಪ್ತಕಾರ್ಯ ಸೂಚಿಯನ್ನು ಅನುಷ್ಠಾನ ಮಾಡಲು ಹಿಂಬಾಗಿಲಿನಿಂದ ಪ್ರಯತ್ನ ಪಡುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾಡಿನ ಸಾಹಿತಿಗಳು, ಪ್ರೊಫೆಸರ್ ಗಳನ್ನು ಕೈಬಿಟ್ಟು ಅವನು ಯಾವನೋ ಚರಂಡಿಯಲ್ಲಿರುವವನನ್ನು ತಂದು ಪ್ರೊಫೆಸರ್ ಎಂದು ಹೇಳಿ ಕೂರಿಸಿದ್ದಾರೆ. ತಲೆಯಲ್ಲಿ ಏನೂ ಇರದವನನ್ನು ತಂದು ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ನಾವು ಬಿಡೋದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಯಾರು ಮಾಡಿದರೆಂದರೆ ಆರ್ ಎಸ್ ಎಸ್ ಮಾಡಿದೆ ಎಂದು ಹೇಳೋಕೆ ಆಗೋಲ್ಲ. ಯಾಕದರೆ ಅದೊಂದು ರಿಜಿಸ್ಟ್ರೆಡ್ ಸಂಘವಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.