ಮೊದಲ ಬಾರಿಗೆ ನೂರು ಪ್ರತಿಶತ ಕ್ಯಾನ್ಸರ್ ಶಮನಕಾರಿ ಔಷಧಿ ಪತ್ತೆ!
Thursday, June 9, 2022
ನ್ಯೂಯಾರ್ಕ್: ಕ್ಯಾನ್ಸರ್ ಶಮನಕಾರಿ ಔಷಧಿಯ ಬಗ್ಗೆ ತಜ್ಞ ವೈದ್ಯರ ತಂಡ ಪ್ರಯೋಗವೊಂದನ್ನು ನಡೆಸುತ್ತಿದ್ದಾಗ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಗುದದ್ವಾರದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 18 ಮಂದಿ ಕ್ಯಾನ್ಸರ್ ಪೀಡಿತರಿಗೆ ಡೋಸ್ಟರ್ ಲಿಮಾಬ್ ಎಂಬ ಔಷಧಿ ನೀಡಲಾಗಿತ್ತು. ಇವರೆಲ್ಲರೂ ಮೊದಲ ಹಾಗೂ ಎರಡನೇ ಹಂತದ ಕ್ಯಾನ್ಸರ್ ಬಾಧಿತರಾಗಿದ್ದರು. ಆರು ತಿಂಗಳ ಬಳಿಕ ಅವರನ್ನು ತಪಾಸಣೆ ಮಾಡಿದಾಗ ಇವರಲ್ಲಿ ಕ್ಯಾನ್ಸರ್ ನ ಯಾವುದೇ ಕುರುಹು ಪತ್ತೆಯಾಗಿಲ್ಲ.
ಈ ರೀತಿಯಲ್ಲಿ ಕ್ಯಾನ್ಸರ್ ರೋಗ ಗುಣವಾಗುತ್ತಿರುವುದು ಇದೇ ಮೊದಲನೇ ಬಾರಿ ಎಂದು ವೈದ್ಯರ ತಂಡ ಅಚ್ಚರಿ ವ್ಯಕ್ತಪಡಿಸಿದೆ. ಈ ಮೂಲಕ ಮಾರಣಾಂತಿಕ ಕಾಯಿಲೆಯ ಶಮನಕ್ಕೆ ಆಶಾಕಿರಣವೊಂದು ಮೂಡಿದಂತಾಗಿದೆ.
ಡೋಸ್ಟರ್ ಲಿಮಾಬ್ ಎಂಬುದು ಪ್ರಯೋಗಾಲಯದಲ್ಯ ಅಭಿವೃದ್ಧಿ ಪಡಿಸಿರುವ ಕಣಗಳು. ಇವು ಕ್ಯಾನ್ಸರ್ ಪೀಡಿತರ ದೇಹವನ್ನು ಪ್ರವೇಶಿಸಿ ಪ್ರತಿಕಾಯ ಶಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತದೆ. ಈ ಔಷಧಿಯ ಪ್ರಯೋಗ ನಡೆಯುತ್ತಿದ್ದು, ಅದರ ಅಂಗವಾಗಿ ಗುದದ್ವಾರದ ಕ್ಯಾನ್ಸರ್ ಪೀಡಿತ 18 ಮಂದಿಗೆ ಈ ಔಷಧಿ ನೀಡಲಾಗಿತ್ತು. ಆರು ತಿಂಗಳ ಕಾಲ ಪ್ರತೀ ಮೂರು ವಾರಕ್ಕೊಮ್ಮೆ ಈ ಔಷಧಿಯನ್ನು ನೀಡಲಾಗಿದೆ. ಇದೀಗ ಎಲ್ಲರೂ ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ ಎಂದು ವೈದ್ಯರ ತಂಡ ಹೇಳಿದೆ.