ಮಂಗಳೂರು: ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿದ್ದಾತ ಸಿಬಿಐ ವಶಕ್ಕೆ
Sunday, June 12, 2022
ಮಂಗಳೂರು: ರೈಲ್ವೆ ನೌಕರರಿಗೆ ಆರೋಗ್ಯ ಕ್ಷಮತೆಯ ನಕಲಿ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡುತ್ತಿದ್ದಾತನನ್ನು ಮಂಗಳೂರು ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು ನಗರದ ಇಬ್ರಾಹೀಂ ಎಂಬಾತ ಸಿಬಿಐ ವಶದಲ್ಲಿರುವ ಆರೋಪಿ. ಈತನನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಸಿಬಿಐ ಅಧಿಕಾರಿಗಳು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ವರ್ಷ ವರ್ಷವೂ ನೌಕರರ ದೈಹಿಕ ಕ್ಷಮತೆಯ ಬಗ್ಗೆ ರೈಲ್ವೆ ಇಲಾಖೆಯ ಆರೋಗ್ಯ ಇಲಾಖೆಯಿಂದಲೇ ದೃಢೀಕರಣಗೊಂಡ ಫಿಟ್ ನೆಸ್ ಸರ್ಟಿಫಿಕೇಟ್ ಅನ್ನು ನೀಡಬೇಕು. ಈ ಹಿನ್ನೆಲೆಯಲ್ಲಿ ರೈಲ್ವೆ ನೌಕರರು ಮಂಗಳೂರಿನ ರೈಲ್ವೆ ನಿಲ್ದಾಣದ ಬಳಿಯಿರುವ ರೈಲ್ವೆ ಇಲಾಖೆಯ ಆರೋಗ್ಯ ಇಲಾಖೆಯಲ್ಲಿ ತಪಾಸಣೆ ನಡೆಸಿ ಸರ್ಟಿಫಿಕೇಟ್ ಪಡೆಯಬೇಕು. ಆದರೆ ಇಬ್ರಾಹೀಂ ಎಂಬಾತನು ರೈಲ್ವೆ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಂಧಿತ ಆರೋಪಿ ಇಬ್ರಾಹೀಂ ಸಾವಿರಕ್ಕೂ ಅಧಿಕ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವುದು ಅಧಿಕಾರಿಗಳಿಗೆ ತಿಳಿದು ಬಂದಿದೆ.