ಮಂಗಳೂರಿನ ಮಳಲಿ ಮಸೀದಿ ಪ್ರಕರಣದಲ್ಲಿ ಯಾವುದೇ ಆದೇಶ ಹೊರಡಿಸದಂತೆ ಸಿವಿಲ್ ಕೋರ್ಟ್ ಗೆ ಹೈಕೋರ್ಟ್ ನಿರ್ದೇಶನ
Tuesday, June 14, 2022
ಮಂಗಳೂರು: ನಗರದ ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಮಾದರಿಯ ರಚನೆ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ಯಾವುದೇ ಆದೇಶ ಹೊರಡಿಸದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಗೆ ಸೋಮವಾರ ನಿರ್ದೇಶನ ನೀಡಿದೆ.
ಮಂಗಳೂರಿನ ತೆಂಕಳೈಪಡಿ ಗ್ರಾಮದ ನಿವಾಸಿ ಧನಂಜಯ್ ಹಾಗೂ ಬಡಗಳೈಪಡಿ ಗ್ರಾಮದ ಮನೋಜ್ ಕುಮಾರ್ ಅರ್ಜಿಯನ್ನು ಈ ಕುರಿತು ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ವಿಚಾರಣೆಯನ್ನು ನಡೆಸಿತು.
ಅರ್ಜಿದಾರರ ಪರ ವಕೀಲರು ಮಂಡಿಸಿರುವ ವಾದವನ್ನು ಆಲಿಸಿದ ಏಕಸದಸ್ಯಪೀಠವು ಪ್ರತಿವಾದಿಯಾಗಿರುವ ಮಳಲಿ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ನೋಟಿಸ್ ಅನ್ನು ಜಾರಿಗೊಳಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ವಾದ - ಪ್ರತಿವಾದ ಮಾಡಿದರೂ ಯಾವುದೇ ಆದೇಶವನ್ನು ಹೊರಡಿಸುವಂತಿಲ್ಲ ಎಂದು ಮಂಗಳೂರಿನ ಮೂರನೇ ಹೆಚ್ಚುವರಿಯಾಗಿ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಆ ಬಳಿಕ ಈ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.