ಮಂಗಳೂರು: ಭೂಕಂಪನದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ, ಜನತೆ ಭಯಪಡುವ ಅವಶ್ಯಕತೆ ಇಲ್ಲ; ಡಿಸಿ
Saturday, June 25, 2022
ಮಂಗಳೂರು: ಸುಳ್ಯದ ಕೆಲ ಭಾಗಗಳು ಸೇರಿದಂತೆ ಕೊಡಗು ಗಡಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 9.10 ನಿಮಿಷ ಸುಮಾರಿಗೆ ಲಘು ಭೂಕಂಪನವಾಗಿದೆ. ಈ ಭೂಕಂಪನದಿಂದ ಯಾವುದೇ ಜೀವ ಹಾನಿಯಾಗಿಲ್ಲ. ಜನತೆ ಭಯಪಡುವ ಅವಶ್ಯಕತೆಯಿಲ್ಲವೆಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಈ ಬಗ್ಗೆ ಮಾತನಾಡಿ, ಭೂಕಂಪನದ ಬಗ್ಗೆ ನಮಗೆ ಬಹಳಷ್ಟು ಕರೆಗಳು ಬಂದಿವೆ. ರಾಜ್ಯ ನೈಸರ್ಗಿಕ ವಿಕೋಪ ಮ್ಯಾನೇಜ್ಮೆಂಟ್ ಸೆಲ್ ನಿಂದಲೂ ಭೂಕಂಪನ ಸಂಭವಿಸಿರುವ ಬಗ್ಗೆ ದೃಢಪಡಿಸಿದೆ. ಗಡಿಭಾಗದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ 2.7 ರಿಕ್ಟರ್ ಮಾಪನ ಭೂಕಂಪನ ಸಂಭವಿಸಿದೆ ಎಂದರು.
ರಾಜ್ಯ ನೈಸರ್ಗಿಕ ವಿಕೋಪ ಮ್ಯಾನೇಜ್ಮೆಂಟ್ ಸೆಲ್ ಹೇಳುವ ಪ್ರಕಾರ ಈ ಭೂಕಂಪನದಿಂದ ಯಾವುದೇ ತೊಂದರೆಗಳಾಗಿಲ್ಲ. ಆದರೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದ್ದೇನೆ. ಭೂಕಂಪನದಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ನೀಡಲು ಪಿಡಿಒಗಳಿಗೆ ಸೂಚನೆ ನೀಡಿದ್ದೇನೆ. ಮತ್ತೆ ಇದೇ ರೀತಿ ಕಂಪನಗಳು ಸಂಭವಿಸಿದಲ್ಲಿ ಯಾರೂ ಮನೆಯೊಳಗೆ ಇರದೆ ಹೊರಗೆ ಬಂದು ಸುರಕ್ಷಿತ ಸ್ಥಳದಲ್ಲಿ ಇರಬೇಕು. ಭೂಕುಸಿತಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಈಗಾಗಲೇ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.