ಮದುವೆ ಸಮಾರಂಭದಲ್ಲಿ ಹಾರಿಸಿದ ಗುಂಡು ನೇರವಾಗಿ ಸೈನಿಕನ ಎದೆ ಸೀಳಿತು: ಮದುಮಗ ವಿರುದ್ಧ ದೂರು ದಾಖಲು
Friday, June 24, 2022
ಲಖನೌ: ಉತ್ತರ ಭಾರತೀಯರಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆ ಮಾಡಲು ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯ. ಆದರೆ ಇಂತಹ ಆಚರಣೆಗಳು ಕೆಲವೊಮ್ಮೆ ದುರಂತದಲ್ಲಿ ಕೊನೆಗೊಳ್ಳುವುದು ವಿಪರ್ಯಾಸವೇ ಸರಿ.
ಇದೀಗ ಮದುವೆ ಸಂಭ್ರಮದಲ್ಲಿದ್ದವರಿಗೆ ಮದುಮಗನೇ ಶಾಕ್ ನೀಡಿರುವ ಘಟನೆಯೊಂದು ನಡೆದಿದೆ. ಈ ಮದುವೆ ಸಮಾರಂಭದಲ್ಲಿ ಮದುಮಗನಿಂದಲೇ ಅಪರಾಧ ಕೃತ್ಯ ನಡೆದುಹೋಗಿದೆ. ಸಂತೋಷಕ್ಕಾಗಿ ಹಾರಿಸಿರುವ ಗುಂಡೊಂದು ನೇರವಾಗಿ ಆತನ ಸ್ನೇಹಿತ ಎದೆಯನ್ನು ಸೀಳಿದೆ. ಪರಿಣಾಮ ಆತ ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶದ ಸೊನ್ ಭದ್ರ ಜಿಲ್ಲೆಯ ಬ್ರಹ್ಮಾನಗರದಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುಮಗ ಮನೀಶ್ ಮಧೇಶಿಯಾ ಸುತ್ತಲೂ ಸ್ನೇಹಿತರು ಸೇರಿದಂತೆ ಹಲವಾರು ಮಂದಿ ನಿಂತಿದ್ದರು. ಈ ವೇಳೆ ಮದುಮಗ ಖುಷಿಗಾಗಿ ಗುಂಡು ಹಾರಿಸಿದ್ದಾನೆ. ಈ ಗುಂಡು ಅಲ್ಲೇ ನಿಂತಿದ್ದ ಆತನ ಸ್ನೇಹಿತ ಸೈನಿಕ ಬಾಬು ಲಾಲ್ ಯಾದವ್ ನಿಗೆ ತಗುಲಿದೆ. ದುರಂತವೆಂದರೆ ಈ ಗನ್ ಕೂಡ ಮೃತ ಯಾದವ್ನದ್ದೇ ಆಗಿದೆ.
ತಕ್ಷಣ ಯಾದವ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಇದೀಗ ವರನ ವಿರುದ್ಧ ದೂರು ದಾಖಲಾಗಿದೆ.
ಯಾವುದೇ ಸಭೆ ಸಮಾರಂಭಗಳಲ್ಲಿ ಈ ರೀತಿ ಬಂದೂಕು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಒಂದು ವೇಳೆ ಬಳಸಿದರೂ ಅನುಮತಿ ಪಡೆದಿರಬೇಕಿದೆ. ಇದು ಗೊತ್ತಿದ್ದರೂ ಪದೇ ಪದೇ ಇಂತಹ ಅಚಾತುರ್ಯ ಘಟನೆಗಳು ನಡೆಯುತ್ತಲೇ ಇದೆ.