ಮತ್ತೆ ರೆಪೋ ದರ ಏರಿಸಿದ RBI- ನಿಮ್ಮ ಲಕ್ಷ ರೂ. ಸಾಲಕ್ಕೆ EMI ಎಷ್ಟಾಗಲಿದೆ?
ಮತ್ತೆ ರೆಪೋ ದರ ಏರಿಸಿದ RBI- ನಿಮ್ಮ ಲಕ್ಷ ರೂ. ಸಾಲಕ್ಕೆ EMI ಎಷ್ಟಾಗಲಿದೆ?
RBI ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಜೂನ್ 8ರಂದು ಒಂದು ತಿಂಗಳ ಅಂತರದಲ್ಲಿ ಮತ್ತೊಮ್ಮೆ ರೆಪೋ ದರ ಏರಿಕೆ ಮಾಡಲಾಗಿದೆ. RBI ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ.
ಈ ಹಿಂದೆ, ಸುಮಾರು 4 ವರ್ಷಗಳ ಬಳಿಕ, ಮೇ 4ರಂದು RBI ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ರೆಪೋ ದರವನ್ನು ಶೇಕಡ 4.40ಕ್ಕೆ ಹೆಚ್ಚಿಸುವ ಘೋಷಣೆ ಮಾಡಿದ್ದರು. ಇದರಿಂದ ಜನರಿಗೆ ಸಾಲದ EMI ಹೊರೆ ಹೆಚ್ಚಾಗಿತ್ತು. ಇದೀಗ ಮತ್ತೆ ರೆಪೋ ದರ ಹೆಚ್ಚಳವಾದ ಕಾರಣ EMI ಹೊರೆ ಮತ್ತೆ ಹೆಚ್ಚಾಗಲಿದೆ.
2022ರ ಏಪ್ರಿಲ್‌ನಲ್ಲಿ RBI ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಇದೀಗ, ಹಣದುಬ್ಬರ ನಿಯಂತ್ರಿಸಲು ಮೇ ತಿಂಗಳಿನಲ್ಲಿ RBI ರೆಪೋ ದರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಸಾಲದು ಎಂಬಂತೆ, ಈಗ ಮತ್ತೆ ಏರಿಕೆ ಮಾಡಿದೆ.
RBI ನಿರ್ಧಾರದ ನೇರ ಪರಿಣಾಮ ಏನು...?
ರೆಪೋ ದರ ಹೆಚ್ಚಿಸಿದ RBIನ ಈ ನಿರ್ಧಾರದ ನೇರ ಪರಿಣಾಮ ಎಂದರೆ ಜನರಿಗೆ ಸಾಲದ ಮೇಲಿನ EMI ಹೆಚ್ಚಳವಾಗುತ್ತದೆ. ಈ ರೆಪೋ ದರವನ್ನು RBI ಕಟ್ ಮಾಡಿದರೆ, ಬ್ಯಾಂಕ್‌ಗಳು ನೀಡುವ ಸಾಲದ ವೆಚ್ಚ ಕಡಿಮೆ ಇರುತ್ತದೆ. ಹಾಗಾಗಿ, ಬ್ಯಾಂಕುಗಳು ತನ್ನ ಸಾಲಗಳಿಗೆ ಕಡಿಮೆ ಬಡ್ಡಿದರ ನಿಗದಿಪಡಿಸುತ್ತದೆ.
ಆದರೆ, ರೆಪೋ ದರ ಹೆಚ್ಚಳವಾದರೆ ಬಹುತೇಕ ಬ್ಯಾಂಕ್‌ಗಳು ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಆಗಾಗಿ, ಬಡ್ಡಿದರ ಹೆಚ್ಚಳವಾದರೆ, ಸಮಾನ ಮಾಸಿಕ ಕಂತುಗಳು (EMI) ಸಹ ಹೆಚ್ಚಾಗುತ್ತವೆ.
RBI ರೆಪೋ ರೇಟ್ ಎಂದರೆ...
RBI ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ RBIನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.
EMI ಲೆಕ್ಕಾಚಾರ ಹೇಗೆ?
ಸುಲಭ ವಿಧಾನದಲ್ಲಿ EMI ಲೆಕ್ಕಾಚಾರ ಅರ್ಥ ಮಾಡಿಕೊಳ್ಳಿ... ನೀವು, 30 ಲಕ್ಷ ರೂ. ಗೃಹ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳೋಣ. 20 ವರ್ಷಗಳ ಅವಧಿಯ ನಿಮ್ಮ ಸಾಲಕ್ಕೆ ಶೇ. 7%ದಷ್ಟು ವಾರ್ಷಿಕ ಬಡ್ಡಿ ನಿಗದಿಪಡಿಸಿದ್ದರೆ, EMI ಸುಮಾರು 1,648 ರೂ. ಏರಿಕೆಯಾಗಲಿದೆ. ಅಂದರೆ ಈಗಿರುವ 23,259/- ರೂ.ನಿಂದ 24,900/- ರೂ.ಗೆ ಏರಲಿದೆ.
ಈ ಲೆಕ್ಕಾಚಾರ ಪ್ರಕಾರ, ಪ್ರತಿ ಒಂದು ಲಕ್ಷ ರೂ. ಸಾಲದ ಮೊತ್ತಕ್ಕೆ 55/- ರೂ. ಅಧಿಕ EMI ಕಟ್ಟಬೇಕಾಗುತ್ತದೆ.
ಅದೇ ಪ್ರಕಾರ, 8 ಲಕ್ಷ ರೂ.ಗಳ ಆಟೋಮೊಬೈಲ್(ವಾಹನ) ಸಾಲ ಪಡೆದಿದ್ದರೆ, 7 ವರ್ಷಗಳ ಅವಧಿಗೆ ಬಡ್ಡಿದರ ಶೇ 10 ರಿಂದ ಶೇ 10.9ಕ್ಕೇರಲಿದೆ. ಇದರ ಜೊತೆಗೆ EMI ಕೂಡಾ 375 ರೂ. ಏರಿಕೆಯಾಗುತ್ತದೆ. ಅಂದರೆ, ರೂ. 13,281/- ನಿಂದ ರೂ. 13,656/- ಗೆ ಏರಿಕೆಯಾಗಲಿದೆ.