Kadaba :-ಕಡಬ ಪ್ರದೇಶದಲ್ಲಿ ಕಾರ್ಯಚರಿಸುತ್ತಿದೆ ನೂರು ರೂಪಾಯಿಯ ಜೆರಾಕ್ಸ್ ನೋಟುಗಳು.. ಗ್ರಾಹಕರೇ, ವರ್ತಕರೇ ಎಚ್ಚರ..!
Sunday, June 5, 2022
ಕಡಬ
ಕಡಬದ ಕೋಡಿಂಬಾಳದಲ್ಲಿರುವ ಚಿಕ್ಕನ್ ಸೆಂಟರ್ ಒಂದರಿಂದ100 ರೂಪಾಯಿಯ ಜೆರಾಕ್ಸ್ ನೋಟ್ ಒಂದು ಚಿಕ್ಕನ್ ಖರೀದಿಸಲು ಬಂದ ಗ್ರಾಹಕರೋರ್ವರಿಗೆ ಸಿಕ್ಕಿದ್ದು,ಈ ಪ್ರದೇಶದ ಗ್ರಾಹಕರು ವರ್ತಕರು ಎಚ್ಚರ ವಹಿಸಬೇಕಿದೆ.
ಕಡಬ ತಾಲೂಕಿನ ಕೋಡಿಂಬಾಳದ ಅಶ್ರಫ್ ಎಂಬವರ ಚಿಕ್ಕನ್ ಸೆಂಟರಿನಿಂದ ಅಸಲಿ ನೋಟನ್ನು ಹೋಲುವ ನೂರು ರೂಪಾಯಿಯ ಜೆರಾಕ್ಸ್ ನೋಟ್ ಒಂದು ಚಿಕ್ಕನ್ ಖರೀದಿಗೆ ಬಂದ ಗ್ರಾಹಕರೋರ್ವರಿಗೆ ದೊರೆತಿದೆ. ಅವರು ಅದನ್ನು ತಿಳಿಯದೇ ಆಟೋ ಚಾಲಕ ರಾಜೇಶ್ ಎಂಬವರಿಗೆ ನೀಡಿದ್ದಾರೆ. ಈ ನೋಟು ಗಮನಿಸಿದ ಆಟೋ ಚಾಲಕ ರಾಜೇಶ್ ಗೆ ಶಂಶಯ ಉಂಟಾಗಿ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಚಿಕ್ಕನ್ ಅಂಗಡಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಚಿಕ್ಕನ್ ಖರೀದಿಗೆ ಬಂದ ಯಾರೋ ತನಗೆ ಈ ನೋಟ್ ನೀಡಿದ್ದಾಗಿಯೂ ಇದನ್ನು ಗಮನಿಸದೇ ಇನ್ನೊರ್ವರಿಗೆ ಚಲಾವಣೆ ಮಾಡಿದ್ದಾಗಿಯೂ ಚಿಕ್ಕನ್ ಅಂಗಡಿ ಮಾಲಕ ಅಶ್ರಫ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ಇಂತಹ ನೋಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಸಾರ್ವಜನಿಕರಿಗೆ ತಿಳಿಸಿದ್ದಾರೆ.