Kadaba -ನಿರಂತರ ಮಳೆ,ಕುಕ್ಕೆ ಸುಬ್ರಮಣ್ಯ ಸಮೀಪ ಬಸ್ ಮೇಲೆ, ಪೆರಿಯಾಶಾಂತಿಯಲ್ಲಿ ಟ್ರಾವೆಲ್ಲರ್ ಮೇಲೆ ಬಿದ್ದ ಮರಗಳು..!
Sunday, June 12, 2022
ಕಡಬ
ಈಗಾಗಲೇ ಕಡಬ, ಸುಬ್ರಮಣ್ಯ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಈ ಮಳೆಗೆ ರಸ್ತೆ ಬದಿಯ
ಅಪಾಯಕಾರಿಯಾಗಿರುವ ಮರಗಳು ಉರುಳಿವೆ.
ಸುಬ್ರಮಣ್ಯ ಸಮೀಪದ ಅನಿಲ ಎಂಬಲ್ಲಿ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮೇಲೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ನಡೆದರೆ, ನೆಲ್ಯಾಡಿ ಸಮೀಪದ ಪೆರಿಯಾಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ಮೇಲೆ ಮರ ಬಿದ್ದು, ವಾಹನ ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಅದೇ ರೀತಿ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ಲರ್ ಮೇಲೆ ಪೆರಿಯಶಾಂತಿ ಸಮೀಪ ರಸ್ತೆಯ ಪಕ್ಕದಲ್ಲಿದ್ದ ಮರವೊಂದು ಟ್ರಾವೆಲರ್ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಟ್ರಾವೆಲ್ಲರ್ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಡಬ, ನೆಲ್ಯಾಡಿ, ಸುಬ್ರಮಣ್ಯ, ಸುಳ್ಯ ಭಾಗದ ಹೆದ್ದಾರಿಗಳಲ್ಲಿ ಆಗಾಗ ರಸ್ತೆ ಬದಿಯ ಮರಗಳು ಬೀಳುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ರಸ್ತೆ ಬದಿಯ ಕೆಲವು ಮರಗಳನ್ನು ಅಪಾಯಕಾರಿ ಎಂದು ಗುರುತಿಸಿದ್ದರೂ ಅಂತಹ ಮರಗಳನ್ನು ತೆರವುಗೊಳಿಸಲು ಕಾನೂನಿನ ನೆಪ ಹೇಳುತ್ತಿರುವ ಅರಣ್ಯ ಇಲಾಖಾ ಅಧಿಕಾರಿಗಳು ಅಪಾಯ ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾತ್ರ ಮಾಡುತ್ತಾರೆ ಎನ್ನಲಾಗಿದೆ. ಇನ್ನಾದರೂ ರಸ್ತೆ ಬದಿಯ ಮರ ತೆರವುಗೊಳಿಸುವಲ್ಲಿ ಅರಣ್ಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.