Mangaluru: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದ ಅಪರಾಧಿಗೆ 11ವರ್ಷ ಕಾರಾಗೃಹ ಶಿಕ್ಷೆ; 50 ಸಾವಿರ ರೂ. ದಂಡ
Wednesday, June 22, 2022
ಮಂಗಳೂರು: ತನ್ನ ಬಟ್ಟೆ ಮಳಿಗೆಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ವ್ಯಕ್ತಿಯೋರ್ವನ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ಪೊಕ್ಸೊ ನ್ಯಾಯಾಲಯ 11 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬಜ್ಪೆ ಕಂದಾವರ ನಿವಾಸಿ ಅಬ್ದುಲ್ ಲತೀಫ್(41) ಶಿಕ್ಷೆಗೊಳಗಾದ ಅಪರಾಧಿ. ಈ ಕಾಮುಕ ಬಜ್ಪೆ ಕೈಕಂಬದಲ್ಲಿ ಬಟ್ಟೆ ಶಾಪ್ ಅನ್ನು ಹೊಂದಿದ್ದ. 2017ರಲ್ಲಿ ಅಬ್ದುಲ್ ಕಾಮುಕ ಲತೀಫ್ ತನ್ನ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಅಮಲು ಪದಾರ್ಥ ಮಿಶ್ರಿತ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ.
ಆದರೆ ಬಾಲಕಿ ಬಜಪೆ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಳು. ಆಕೆ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿತ್ತು. ಆದರೆ ಆರೋಪಿ ಅಬ್ದುಲ್ ಲತೀಫ್ ಪೊಲೀಸರ ಕೈಗೆ ಸಿಗದೆ ಸುಮಾರು 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರು ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ದಸ್ತಗಿರಿ ಮಾಡಿದ್ದರು.
ಈ ಪ್ರಕರಣದಲ್ಲಿ ತನಿಖೆ ನಡೆಸಿದ ಬಜ್ಪೆ ಠಾಣೆಯ ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ ಕೆ.ಆರ್. ನಾಯ್ಕ್ ರವರು ನ್ಯಾಯಾಲಯಕ್ಕೆ ದೋಪಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಧಕೃಷ್ಣ ಅವರು ವಾದವನ್ನು ಆಲಿಸಿ ಆರೋಪಿ ಅಬ್ದುಲ್ ಲತೀಫ್ ತಪ್ಪಿತಸ್ಥನೆಂದು ಘೋಷಿಸಿ 11 ವರ್ಷಗಳ ಕಾರಗೃಹ ಶಿಕ್ಷೆ ಮತ್ತು ರೂ. 50,000/- ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಸರಕಾರಿ ಅಭಿಯೋಜಕ ವಿರುದ್ಧ ವೆಂಕಟರಮಣ ಸ್ವಾಮಿ, ಶೇಖರ ಶೆಟ್ಟಿಯವರು ವಾದಿಸಿದ್ದಾರೆ.