ತನ್ನನ್ನೇ ತಾನು ವಿವಾಹವಾಗಲಿದ್ದಾರಂತೆ ಈ ಯುವತಿ: ಬಳಿಕ ಗೋವಾದಲ್ಲಿ ಹನಿಮೂನ್ ಮಾಡುತ್ತಾರಂತೆ
Friday, June 3, 2022
ವಡೋದರಾ: ಜಗತ್ತಿನಲ್ಲಿ ಎಂಥೆಂತಹ ಜನರಿರುತ್ತಾರೆ ಎಂದು ಹೇಳಲು ಅಸಾಧ್ಯ. ಅಂತಹ ಜನರಲ್ಲಿ ಈ ಯುವತಿಯೂ ಓರ್ವಳು. ಈಕೆಯ ಹೆಸರು ಕ್ಷಮಾ ಬಿಂದು(24). ಈಕೆಗೆ ವಿವಾಹ ನಿಶ್ಚಯವಾಗಿದೆ. ಅದರಲ್ಲೇನು ವಿಶೇಷವೇನು ಎನ್ನುತ್ತೀರಾ. ವಿಶೇಷವಿದೆ, ಅದೇನೆಂದರೆ ಈಕೆ ಯಾವುದೇ ಪುರುಷ ವರನನ್ನು ಮದುವೆಯಾಗದೆ ತನ್ನನ್ನೇ ತಾನೇ ವಿವಾಹವಾಗುತ್ತಿದ್ದಾಳೆ. ಆದ್ದರಿಂದ ವರನೋರ್ವನನ್ನು ಬಿಟ್ಟು ಕಾರ್ಯಕ್ರಮಕ್ಕೆ ದಿನಾಂಕ, ಛತ್ರ ಎಲ್ಲವೂ ನಿಗದಿಯಾಗಿದೆ.
ಈ ವಿಶಿಷ್ಟ ವಿವಾಹಕ್ಕೆ ಕ್ಷಮಾ ಬಿಂದುವಿನ ಪೋಷಕರು ಸಮ್ಮತಿಸಿದ್ದು, ಅವರೇ ಮುಂದೆ ನಿಂತು ಸಂಪ್ರದಾಯದ ಪ್ರಕಾರ ಜೂನ್ 11ರಂದು ನಡೆಯಲಿದೆ. ಈ ಸ್ವಯಂ ವಿವಾಹ ಗುಜರಾತ್ ನಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಎನ್ನಲಾಗಿದೆ. ಕ್ಷಮಾ ಬಿಂದು ತನ್ನ ನಿರ್ಧಾರವನ್ನು 'ಸ್ವಯಂ-ಪ್ರೀತಿಯ ಕ್ರಿಯೆ' ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ನಾನು ಎಂದಿಗೂ ವಿವಾಹವಾಗಲು ಬಯಸಲಿಲ್ಲ. ಆದರೆ ನಾನು ವಧುವಾಗಲು ಬಯಸಿದ್ದೆ. ಹಾಗಾಗಿ ತನ್ನನ್ನು ತಾನೇ ಮದುವೆಯಾಗಲು ನಿರ್ಧರಿಸಿದ್ದೇನೆ'' ಎಂದು ಹೇಳಿದ್ದಾರೆ.
ಈ ಸ್ವಯಂ ವಿವಾಹದ ಬಗ್ಗೆ ತಾನು ಆನ್ ಲೈನ್ ನಲ್ಲಿ ಓದಿದ್ದೆ. ಆದರೆ ದೇಶದ ಎಲ್ಲಿಯೂ ಈ ರೀತಿ ವಿವಾಹ ನಡೆದಿಲ್ಲ. ಬಹುಶಃ ಸ್ವಯಂ ಪ್ರೀತಿಯ ಕುರಿತಾಗಿ ತಾನೇ ಒಂದು ಉದಾಹರಣೆಯಾಗುತ್ತೇನೆ. ನನ್ನ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಎಲ್ಲಾ ವಿಧಿವಿಧಾನಗಳನ್ನು ಆಚರಿಸುತ್ತಾರೆ. ವಿವಾಹದ ಬಳಿಕ ಗೋವಾದಲ್ಲಿ ಎರಡು ವಾರಗಳ ಹನಿಮೂನ್ ನಡೆಸಲಿದ್ದೇನೆ ಎಂದು ಹೇಳುತ್ತಾರೆ ಕ್ಷಮಾ ಬಿಂದು.