ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ದೋಣಿಯಲ್ಲಿ ಸಂಚರಿಸುತ್ತಿದ್ದ ಸೋದರರು ನೀರುಪಾಲು
Thursday, June 2, 2022
ರೇವಾ(ಮಧ್ಯ ಪ್ರದೇಶ): ಮದುವೆ ಕಾರ್ಯಕ್ರಮಕ್ಕೆ ದೋಣಿಯಲ್ಲಿ ತೆರಳುತ್ತಿದ್ದ ಮೂವರು ಸೋದರರು ನೀರುಪಾಲಾಗಿರುವ ದುರ್ಘಟನೆಯೊಂದು ಹರ್ದಹನ್ ಗ್ರಾಮದ ಬಳಿ ನಡೆದಿದೆ.
ಹರ್ದಹನ್ ಗ್ರಾಮದ ನಿವಾಸಿಗಳಾದ ಮೂವರು ಸಹೋದರರಾದ ಸತ್ಯಂ ಕೇವತ್(19), ಪವನ್ ಕುಮಾರ್ ಕೇವತ್(20) ಮತ್ತು ರಾಮಶಂಕರ್ ಕೇವತ್(18) ನೀರುಪಾಲಾದ ದುರ್ದೈವಿ ಸೋದರರು.
ಈ ಮೂವರು ಸೋದರರು ಮದುವೆ ಕಾರ್ಯಕ್ರಮದಲ್ಲಿ ಹಾಜರಾಗಲು ಗುರುಗುಡ ಗ್ರಾಮಕ್ಕೆ ಹೋಗುತ್ತಿದ್ದರು. ಆದರೆ ಅವರಿಗೆ ತಮಸ್ ನದಿಯನ್ನು ದಾಟಿ ಪಕ್ಕದ ಗ್ರಾಮಕ್ಕೆ ತೆರಳಬೇಕಿತ್ತು. ಆದ್ದರಿಂದ ಅವರು ತಮ್ಮ ಬೈಕ್ನೊಂದಿಗೆ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು.
ಈ ದೋಣಿಯಲ್ಲಿ ಮೂವರು ಸೋದರರಲ್ಲದೆ ನಾವಿಕ ಹಾಗೂ ಮತ್ತೋರ್ವ ಯುವಕನೂ ಪ್ರಯಾಣಿಸುತ್ತಿದ್ದರು. ಆದರೆ ನದಿಯ ಮಧ್ಯ ಬರುತ್ತಿದ್ದಾಗ ಸಮತೋಲನ ಕಳೆದುಕೊಂಡು ದೋಣಿ ಮಗುಚಿ ಬಿದ್ದಿದೆ. ಪರಿಣಾಮ ಎಲ್ಲರೂ ನದಿಗೆ ಬಿದ್ದಿದ್ದಾರೆ. ಆದರೆ ನಾವಿಕ ಮತ್ತು ಇನ್ನೊಬ್ಬ ಯುವಕ ಈಜಿ ದಡ ಸೇರಿದರು. ಆದರೆ ಈ ಮೂವರು ಸಹೋದರರು ಮಾತ್ರ ನಾಪತ್ತೆಯಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ನಡೆಸಿದ್ದರು. ಆದರೆ ಸೋದರರ ಸುಳಿವು ಸಿಕ್ಕಿರಲಿಲ್ಲ. ರಾತ್ರಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಇದೀಗ ಮತ್ತೆ ಮೂವರು ಸಹೋದರರ ಪತ್ತೆ ಕಾರ್ಯ ಮುಂದುವರಿದಿದೆ.