ಪುತ್ರನ ಪ್ರೀತಿಗೆ ತಂದೆ ಬಲಿ: ಕಲಬುರಗಿಯಲ್ಲೊಂದು ಆತಂಕಕಾರಿ ಘಟನೆ
Sunday, June 12, 2022
ಕಲಬುರಗಿ: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾದ ಯುವಕನ ಮೇಲೆ ಕುಪಿತಗೊಂಡ ಯುವತಿಯ ಮನೆಯವರು ಆತನ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕನ ತಂದೆ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ.
ತೀವ್ರ ಹಲ್ಲೆಗೊಳಗಾದ ದಶರಥ್ ಪೂಜಾರಿ (60) ಮೃತಪಟ್ಟ ದುರ್ದೈವಿ.
ಕೊಲೆಯಾದ ಥಶರಥ್ ಪೂಜಾರಿಯವರ ಪುತ್ರ ಸೂರ್ಯಕಾಂತ್ ಚಾಮನೂರು ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ವಿವಾಹಕ್ಕೆ ಯುವತಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಮದುವೆಯ ಬಳಿಕ ಸೂರ್ಯಕಾಂತ್ ಹಾಗೂ ಸಂಗೀತಾ ಬೆಂಗಳೂರಿನಲ್ಲಿ ಸಂಸಾರ ಹೂಡಿದ್ದರು.
ಇದೀಗ ಅವರು ಒಂದು ವರ್ಷದ ಬಳಿಕ ಚಾಮನೂರಿನ ಮನೆಗೆ ಬಂದಿದ್ದರು. ಈ ವೇಳೆ ಎರಡೂ ಮನೆಯವರ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ಹೋಗಿ ಯುವತಿ ಮನೆಯವರು ಕೊಡಲಿಯಿಂದ ದಾಳಿ ಮಾಡಿದ್ದಾರೆ. ಪರಿಣಾಮ ದಶರಥ್ ಪೂಜಾರಿಯವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸೂರ್ಯಕಾಂತ್ ಅವರೂ ಗಾಯಗೊಂಡಿದ್ದಾರೆ. ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.