ಮಂಗಳೂರು: ಹಳೆಯ ವೈಷಮ್ಯದಿಂದ ರೌಡಿಶೀಟರ್ ನನ್ನು ಕೊಚ್ಚಿ ಕೊಲೆಗೈದ ಸ್ನೇಹಿತರು
Tuesday, June 7, 2022
ಮಂಗಳೂರು: ರೌಡಿಸಂನಲ್ಲಿರುವವರಿಗೆ ಯಾರಿಂದ, ಯಾವಾಗ ಪ್ರಾಣಭೀತಿ ಎದುರಾಗುತ್ತದೆ ಎಂದು ಹೇಳೋದು ಕಷ್ಟ. ಇದೀಗ ಹಳೆಯ ವೈಷಮ್ಯವನ್ನು ಇರಿಸಿಕೊಂಡಿದ್ದ ಸ್ನೇಹಿತರು ರೌಡಿಶೀಟರ್ ಮೇಲೆ ತಲವಾರು ಜಳಪಿಸಿದ್ದಾರೆ. ಪರಿಣಾಮ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ರಾಜಾ ಅಲಿಯಾಸ್ ರಾಘವೇಂದ್ರ(29) ಮೃತಪಟ್ಟ ರೌಡಿಶೀಟರ್. ಸೋಮವಾರ ಸಂಜೆ ನಗರದ ಹೊರವಲಯದಲ್ಲಿರುವ ಮೀನಕಳಿಯ ಬೀಚ್ ಬಳಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಾಘವೇಂದ್ರನನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಬಳಿಕ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹಳೆಯ ಕೊಲೆಯೊಂದರ ದ್ವೇಷವೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೆ ರಾಘವೇಂದ್ರನ ಹಳೆಯ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.