Subrahmanya:-ಸ್ವತಃ ಗೃಹ ಸಚಿವರಿಂದ ಕೋಟಿ ಘೋಷಣೆಯಾದರೂ ಪೊಲೀಸ್ ಠಾಣೆಗೆ ಟಾರ್ಪಲೆ ಗತಿ..!
Thursday, June 9, 2022
ಸುಬ್ರಮಣ್ಯ
ಸ್ವತಃ ಗೃಹ ಸಚಿವರು ಬಂದು ಕೋಟಿ ರೂಪಾಯಿ ಅನುದಾನ ಆದೇಶ ನೀಡಿ ಹೋದ ದೇಶದ ಪ್ರಾಮುಖ್ಯ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಮಾಡಿಗೆ ಮಾತ್ರ ಟರ್ಪಾಲೇ ಗತಿಯಾಗಿ ಬಿಟ್ಟಿದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೇಲ್ಛಾವಣಿ ಶಿಥಿಲವಾಗಿ 3 - 4 ವರ್ಷಗಳೇ ಕಳೆದಿದೆ. ಇದರ ಹಂಚುಗಳ ಮಧ್ಯೆ ಅಲ್ಲಲ್ಲಿ ನೀರು ಸೋರುತ್ತಿದ್ದು, ಪ್ರಕರಣಗಳ ದಾಖಲೆಗಳು ಒದ್ದೆಯಾಗುವ ಭಯ ಎದುರಾಗಿದೆ. ಅಪರಾಧಿಗಳ ದಸ್ತಗಿರಿ ಮಾಡಿ ಕೂಡಿಹಾಕುವ ಕೊಠಡಿಯಲ್ಲೂ ಅವರಿಗೆ ಶಿಕ್ಷೆ ಎಂಬಂತೆ ನೀರು ತುಂಬುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದಕ್ಷಿಣ ಭಾರತದಲ್ಲೇ ಸರಕಾರಕ್ಕೆ ಆದಾಯವಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿ ದಿನಂಪ್ರತಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಗಾಗ ಕೇಂದ್ರ, ರಾಜ್ಯ ಮಂತ್ರಿಗಳು, ಗಣ್ಯರು, ಪೊಲೀಸ್ ಇಲಾಖೆಯ ನಿವೃತ್ತ, ಹಾಲಿ ಕಮಿಷನರುಗಳು, ಮಾನ್ಯ ನಿವೃತ್ತ ಮತ್ತು ಪ್ರಸ್ತುತ ಇರುವ ನ್ಯಾಯಾಧೀಶರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಹಾಲಿ ಎಸ್ಪಿ, ಡಿವೈಎಸ್ಪಿ, ಇನ್ಸ್ ಪೆಕ್ಟರ್ ಗಳು ಮತ್ತಿತರ ಇಲಾಖಾ ಅಧಿಕಾರಿಗಳು ಬರುತ್ತಾರೆ. ಇಲ್ಲಿ ಬಂದರೆ ಕೆಲವೊಮ್ಮೆ ದೇವರ ದರ್ಶನ ಕಾರ್ಯ, ಹಾಗೂ ಸ್ವಾಕಾರ್ಯ ಎರಡೂ ಆಗುತ್ತದೆ. ಬರುತ್ತಿರುವ ಇವರಿಗೆಲ್ಲಾ ಇಲ್ಲಿನ ಠಾಣೆಯೇ ಸಕಲ ವ್ಯವಸ್ಥೆ ಮಾಡಬೇಕು. ದೇವರ ದರ್ಶನ ಭಾಗ್ಯ, ವಸತಿ, ದೇವಸ್ಥಾನದ ಶಿಷ್ಟಾಚಾರ, ಪೊಲೀಸರ ಗೌರವ ಎಲ್ಲವನ್ನೂ ಅವರು ಸ್ವೀಕರಿಸುತ್ತಾರೆ ಆದರೆ ಇಲ್ಲಿನ ಪೊಲೀಸ್ ಸಿಬ್ಬಂದಿಗಳು ಉಳಿದುಕೊಳ್ಳುವ ಠಾಣೆಯನ್ನು ಮೇಲ್ದರ್ಜೆಗೆ ಏರ್ಪಡಿಸುವ ಮನಸ್ಸು ಮಾತ್ರ ಈ ತನಕ ಮಾಡಿಲ್ಲ.
ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾನ್ಯ ಗೃಹಸಚಿವ ಅರಗ ಜಾನೇಂದ್ರ ಅವರು ಬಂದಿದ್ದು ಈ ಸಂದರ್ಭ ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಸುಬ್ರಹ್ಮಣ್ಯ ಠಾಣೆಗೆ ಒಂದು ಕೋಟಿ ಅನುದಾನವಿದ್ದು ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ ಕೋಟಿ ಅನುದಾನ ಟೆಂಡರ್ ಕರೆದದ್ದಾಗಲಿ, ಅನುದಾನ ಬಿಡುಗಡೆ ಮಾಡಿದ್ದಾಗಲಿ ಮಾತ್ರ ಗೊತ್ತಾಗಿಲ್ಲ. ಠಾಣೆಯ ಮೇಲ್ಚಾವಾಣಿ ಬೀಳುವ ಮುಂಚೆ ಹೊಸ ಕಟ್ಟಡಕ್ಕೆ ಶಿಲನ್ಯಾಸವಾದರೆ ಸಾಕು ಎಂಬುದು ಸಾರ್ವಜನಿಕರ ಆಗ್ರಹ.