ಬಕೇಟ್ ನೀರಿಗೆ ಮುಳುಗಿಸಿ ಪತ್ನಿಯ ಹತ್ಯೆ ಮಾಡಿದ ಪತಿ ರೈಲಿನಡಿ ತಲೆಯಿಟ್ಟು ಆತ್ಮಹತ್ಯೆ!
Wednesday, June 29, 2022
ಹೈದರಾಬಾದ್(ತೆಲಂಗಾಣ) : ದಂಪತಿ ನಡುವಿನ ಮನಸ್ತಾಪ ಇಬ್ಬರನ್ನೂ ಬಲಿ ಪಡೆದ ದಾರುಣ ಘಟನೆಯೊಂದು ಹೈದರಾಬಾದ್ನ ಪಂಜಾಗುಟ್ಟದಲ್ಲಿ ನಡೆದಿದೆ. ಮನೆಯಲ್ಲಿ ಬಕೆಟ್ ನೀರಿನಲ್ಲಿ ಪತ್ನಿಯ ತಲೆಯನ್ನು ಮುಳುಗಿಸಿ ಕೊಲೆಗೈದಿರುವ ಪತಿ ಬಳಿಕ ತಾನೂ ರೈಲಿನಡಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಸ್ಸಾಂ ಮೂಲದ ಮಹಾನಂದ ಬಿಶ್ವಾಸ್ (24) ಹಾಗೂ ಆತನ ಪತ್ನಿ ಚಂಪಾ (22) ಮೃತ ದಂಪತಿ. ಇವರಿಬ್ಬರೂ ಪಂಜಾಗುಟ್ಟದಲ್ಲಿನ ಜಿವಿಕೆ ಮಾಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದರು. ಪಂಜಾಗುಟ್ಟ ವ್ಯಾಪ್ತಿಯ ಪ್ರೇಮ ನಗರದಲ್ಲಿ ಮಹಾನಂದ ದಂಪತಿ ವಾಸವಾಗಿದ್ದರು. ಆದರೆ, ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಸೋಮವಾರ ಸಂಜೆ ಮನೆಯಲ್ಲಿದ್ದ ನೀರು ತುಂಬಿದ್ದ ಬಕೆಟ್ಗೆ ಮಹಾನಂದ ತನ್ನ ಪತ್ನಿ ಚಂಪಾಳ ತಲೆಯನ್ನು ಮುಳುಗಿಸಿ ಕೊಲೆ ಮಾಡಿದ್ದಾನೆ. ಬಳಿಕ ನಾಮಪಲ್ಲಿ ರೈಲ್ವೆ ನಿಲ್ದಾಣದ ಸಮೀಪ ರೈಲು ಹಳಿಗೆ ಬಿದ್ದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಂದನ ಮೃತದೇಹ ಪತ್ತೆಯಾದ ಬಳಿಕ ರೈಲ್ವೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಆತನ ಬಳಿ ಸಣ್ಣ ಡೈರಿಯೊಂದು ದೊರೆತಿದ್ದು, ಅದರಲ್ಲಿ ಪತ್ನಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಬರೆದ ಬರಹ ಸಿಕ್ಕಿದೆ. ಅಂತೆಯೇ ಪೊಲೀಸರು ಮನೆಯ ವಿಳಾಸ ಪತ್ತೆ ಹಚ್ಚಿ, ಮನೆಗೆ ಬಂದಿದ್ದಾರೆ. ಆದರೆ, ಮನೆಯ ಹೊರಗೆ ಬೀಗ ಹಾಕಿತ್ತು. ಆಗ ಬೀಗ ಹೊಡೆದು ಮನೆಯೊಳಗೆ ಹೋಗಿ ನೋಡಿದಾಗ ಚಂಪಾ ಮೃತದೇಹ ದೊರಕಿದೆ ಎಂದು ಪಂಜಾಗುಟ್ಟ ಡಿಜಿ ನಾಗಯ್ಯ ವಿವರಿಸಿದ್ದಾರೆ.