ಮಂಗಳೂರು: ಚಿಟ್ ಫಂಡ್ ವಂಚನೆಯಿಂದ ಮನನೊಂದು ವೃದ್ಧ ಆತ್ಮಹತ್ಯೆ
Saturday, June 4, 2022
ಮಂಗಳೂರು: ಚಿಟ್ ಫಂಡ್ ವ್ಯವಹಾರದಲ್ಲಿ ಇಬ್ಬರಿಂದ ಹಣ ಮರಳದ ಹಿನ್ನೆಲೆಯಲ್ಲಿ ಮನನೊಂದ ವೃದ್ಧರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಶಾಲೆಯ ಬಳಿ ನಡೆದಿದೆ.
ಕೋಟೆಕಾರು ಗ್ರಾಮದ ಮಾಡೂರು ಶಾಲೆಯ ಬಳಿ ನಿವಾಸಿ ಜಯರಾಮ ಶೆಟ್ಟಿ (71) ಮೃತಪಟ್ಟ ದುರ್ದೈವಿ. ಜಯರಾಮ ಶೆಟ್ಟಿಯವರು ಇಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಪತ್ನಿ ಲೀನಾ ಜೆ.ಶೆಟ್ಟಿಯವರು ಬೆಳಗ್ಗೆ ಕೋಣೆಗೆ ಹೋದ ವೇಳೆ ವಿಚಾರ ಬೆಳಕಿಗೆ ಬಂದಿದೆ.
ಜಯರಾಮ ಶೆಟ್ಟಿಯವರು ಸೀಯಾಳ ವ್ಯಾಪಾರಿಯಾಗಿದ್ದು, ಚಿಟ್ ಫಂಡ್ ವ್ಯವಹಾರವನ್ನು ಮಾಡುತ್ತಿದ್ದರು. ಆದರೆ ಚಿಟ್ ಫಂಡ್ ಹಣ ಪಡೆದವರು ಮರಳಿ ಪಾವತಿಸಿರಲಿಲ್ಲ. ಇದರಿಂದ ಜಯರಾಮ ಅವರು ನಷ್ಟ ಅನುಭವಿಸಿದ್ದರು. ಇದರ ಚಿಂತೆಯಲ್ಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಪತ್ನಿ ದೂರಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.