ಮದುವೆಯಾದ ನಾಲ್ಕೇ ತಿಂಗಳಿಗೆ ಬಾರದ ಲೋಕಕ್ಕೆ ಪಯಣಿಸಿದ ಯುವತಿ: ಡೆತ್ ನೋಟ್ ನಲ್ಲೇನಿದೆ?
Sunday, June 5, 2022
ವಿವಾಹವಾದ ನಾಲ್ಕೇ ತಿಂಗಳಿಗೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾಳೆ. ಈಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ 'ಹಠ ಮಾಡಿಕೊಂಡು ಮದುವೆಯಾದೆ. ಹಠದಿಂದಲೇ ಸಾಯುತ್ತಿದ್ದೇನೆ' ಎಂದು ಬರೆದಿದ್ದಾಳೆ.
ಹೌದು... ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೋಳನಹಳ್ಳಿಯ ರವಿಕುಮಾರ್-ಹೇಮಾವತಿ ದಂಪತಿಯ ಪುತ್ರಿ ಅಂಜು ಎಂಬಾಕೆ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು.
ಈಕೆ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಆದರೆ ಮನೆಯವರು ಈ ಪ್ರೀತಿಯನ್ನು ಒಪ್ಪದಿದ್ದರೂ, ಹಠ ಮಾಡಿ ಮನೆಯವರನ್ನು ಒಪ್ಪಿಸಿ ಕಳೆದ ನಾಲ್ಕು ತಿಂಗಳ ಹಿಂದೆ ಅಂಜು ಪ್ರಿಯತಮ ಅಂಜನ್ ಕಣಿಯಾರ್ ನನ್ನು ವಿವಾಹವಾಗಿದ್ದಳು.
ಆದರೆ ಅದೇನಾಯ್ತೋ ಗೊತ್ತಿಲ್ಲ. ಈಕೆ ಬೆಂಗಳೂರಿನಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿದ್ದಾಳೆ.
ಅದರಲ್ಲಿ 'ಅಮ್ಮಾ ಐ ಲವ್ ಯೂ... ನನ್ನನ್ನು ಕ್ಷಮಿಸು.. ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿಯಿಲ್ಲ. ಏನು ಮಾಡುತ್ತಿದ್ದೇನೆಂದು ಗೊತ್ತಾಗ್ತ ಇಲ್ಲ ಅಂಜನ್' ಎಂದು ತಾಯಿಗೆ ಹಾಗೂ ಪತಿಗೆ ಪತ್ರ ಬರೆದಿದ್ದಾರೆ.
ಪತಿ ಹಾಗೂ ಆತನ ಕುಟುಂಬಸ್ಥರು ತಮ್ಮ ಸಂಬಂಧಿಗಳ ಹುಟ್ಟುಹಬ್ಬಕ್ಕೆಂದು ಹೋಗಿದ್ದ ಸಂದರ್ಭ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಯಕ್ರಮ ಮುಗಿಸಿ ಅವರು ಸಂಜೆ 6ಗಂಟೆ ವೇಳೆಗೆ ಮನೆಗೆ ಬಂದ ವೇಳೆ ಈ ದುರ್ಘಟನೆ ಬೆಳಕಿಗೆ ಬಂದಿದೆ. ಆದರೆ ಅಂಜು ತಾಯಿ ಪುತ್ರಿಯ ಪತಿಯ ಮನೆಯವರ ವಿರುದ್ಧ ವರದಕ್ಷಿಣೆ ಆರೋಪ ಮಾಡಿದ್ದಾರೆ.
ಆದರೆ ಡೆತ್ ನೋಟ್ ನಲ್ಲಿ 'ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿಯಿಲ್ಲ. ಏನು ಮಾಡುತ್ತಿದ್ದೇನೆಂದು ಗೊತ್ತಾಗ್ತ ಇಲ್ಲ. ನನಗೆ ಬೆನ್ನು ನೋವಿದೆ. ಹರ್ಟ್ ಆಗುತ್ತಿದೆ. ಏನು ಮಾಡುತ್ತಿರುವೆ ಎಂದು ಗೊತ್ತಾಗ್ತಿಲ್ಲ. ನೀನು ಜೊತೆಗಿದ್ದರೂ, ದೂರ ಇರುತ್ತಿದ್ದಿ ಎಂದೆನಿಸುತ್ತಿದೆ. ಬಾಯ್ ಇನ್ಯಾವತ್ತೂ ನಿನಗೆ ಹಿಂಸೆ ಮಾಡುವುದಿಲ್ಲ' ಎಂದು ಪತಿಗೆ ಡೆತ್ ನೋಟ್ ಬರೆದಿಟ್ಟಿದ್ದಾಳೆ.
ಪತಿಯೂ ಇದನ್ನೇ ಹೇಳುತ್ತಿದ್ದಾನೆ. ಆದರೆ ಆಕೆಯ ತಾಯಿ ತದ್ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.