ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ: ಟಿಸಿ ಪಡೆಯಲು ಮುಂದಾಗಿದ್ದಾರೆ ಐವರು ವಿದ್ಯಾರ್ಥಿನಿಯರು?
Monday, June 20, 2022
ಮಂಗಳೂರು: ಮಂಗಳೂರು ವಿವಿಯ ಅಧೀನದಲ್ಲಿರುವ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಕರಣದ ಐವರು ವಿದ್ಯಾರ್ಥಿನಿಯರು ಟ್ರಾನ್ಸ್ಫರ್ ಸರ್ಟಿಫಿಕೇಟ್ (ಟಿಸಿ) ಪಡೆಯಲು ಮುಂದಾಗಿದ್ದಾರೆಂಬ ವಿಚಾರವೊಂದು ಕೇಳಿ ಬರುತ್ತಿದೆ.
ಮಂಗಳೂರು ವಿವಿ ಕಾಲೇಜಿನಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಬಳಿಕ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿತ್ತು. ಮಂಗಳೂರು ವಿವಿ ಕಾಲೇಜಿನಲ್ಲಿ 44 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಇವರಲ್ಲಿ 15 ಮಂದಿ ಹಿಜಾಬ್ ಧರಿಸಿ ತರಗತಿಯ ಪ್ರವೇಶವನ್ನು ಕೋರಿದ್ದರು. ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳುವುದಿದ್ದರೆ ಅವರಿಗೆ ಟಿಸಿ ನೀಡಲು ವ್ಯವಸ್ಥೆ ಮಾಡಲಾಗುವುದೆಂದು ಮಂಗಳೂರು ವಿವಿ ಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯರೂ ತಿಳಿಸಿದ್ದರು.
ಇದೀಗ ಐವರು ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಾರೆಂಬ ವಿಚಾರವೊಂದು ಕೇಳಿ ಬರುತ್ತಿದೆ. ಆದರೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈಯವರು ಟಿಸಿ ಪಡೆಯುವ ಬಗ್ಗೆ ಮಾಹಿತಿ ನೀಡಿ, ಯಾವ ವಿದ್ಯಾರ್ಥಿನಿಯೂ ಈವರೆಗೆ ಟಿಸಿ ಪಡೆಯಲು ಅರ್ಜಿ ನೀಡಿಲ್ಲ. ಇದೀಗ ಕಾಲೇಜಿನಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ತರಗತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.