ಮಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ಲಕ್ಷಾಂತರ ರೂ. ಚಿನ್ನಾಭರಣ ಕಳವು
Tuesday, June 7, 2022
ಮಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಮೂಲದ ದಂಪತಿಯ ಲಕ್ಷಾಂತರ ರೂ. ಚಿನ್ನಾಭರಣ ಕಳವು ಆಗಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಮೂಲದ ಜಲಜಾ ಸುರೇಶ್ ಹಾಗೂ ಅವರ ಪತಿ ಗುಜರಾತ್ ನ ವಾಪಿ ಎಂಬಲ್ಲಿಂದ ತ್ರಿಶ್ಶೂರ್ ಕಡೆಗೆ ಪ್ರಯಾಣ ಬೆಳೆಸಿದ್ದರು. ದಂಪತಿ ಇಂದೋರ್ ಕುಚ್ಚುವೆಲಿ 2 ಎಕ್ಸ್‌ಪ್ರೆಸ್ ರೈಲಿನಲ್ಲಿ ಫೆ.23ರಂದು ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಜಲಜಾ ಸುರೇಶ್ ತಲೆಯ ಬಳಿ ಇಟ್ಟಿದ್ದ ಚಿನ್ನಾಭರಣದ ಬ್ಯಾಗ್ ಅನ್ನೇ ಅಪಹರಿಸಿದ್ದಾರೆ.
ಈ ಬ್ಯಾಗ್ ನಲ್ಲಿ ಚಿನ್ನದ ಸರ, ತಾಳಿಯೊಂದಿಗೆ ಇದ್ದ ಚಿನ್ನದ ಸರ, ಬಳೆಗಳು, ಉಂಗುರ, ಕಿವಿಯೋಲೆ, ಮೊಬೈಲ್ ಫೋನ್, ಆಧಾರ್ ಕಾರ್ಡ್, ಓಟರ್ ಐಡಿ, ಎಟಿಎಂ ಕಾರ್ಡ್ ಗಳು ಕಳವಾಗಿದೆ. 13 ಸಾವಿರ ರೂ. ಮೊಬೈಲ್ ಹಾಗೂ 3,10,000 ಲಕ್ಷ ರೂ. ಚಿನ್ನಾಭರಣಗಳು ಕಳುವಾಗಿರೋದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಫೆ.24ರಂದು ನಸುಕಿನ ವೇಳೆ 2.15ರ ಸುಮಾರಿಗೆ ಬ್ಯಾಗ್ ಕಳುವಾಗಿರೋದು ಪತ್ತೆಯಾಗಿದೆ. ಈ ಬಗ್ಗೆ ತ್ರಿಶ್ಶೂರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇದೋಗ ಬರೋಬ್ಬರಿ ಮೂರು ತಿಂಗಳ ಬಳಿಕ ಜೂನ್ 6ರಂದು ಪ್ರಕರಣ ಮುಲ್ಕಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.