ಸಾಲದ ಸುಳಿಗೆ ಸಿಲುಕಿ ಮನೆ ಮಾರಾಟ ಮಾಡಬೇಕೆನ್ನುವ ವ್ಯಕ್ತಿಗೆ ಖುಲಾಯಿಸಿತು ಅದೃಷ್ಟ: 1 ಕೋಟಿ ರೂ. ಬಂಪರ್ ಜಾಕ್ ಪಾಟ್ ಹೊಡೆಯಿತು
Wednesday, July 27, 2022
ಚೆಂಗನ್ನೂರು: ಅದೃಷ್ಟವೆನ್ನುವುದು ಯಾರಿಗೆ?, ಯಾವಾಗ ? ಯಾವ ರೂಪದಲ್ಲಿ ಬರುತ್ತದೆಂದು ಹೇಳುವುದು ಅಸಾಧ್ಯ. ಯಾರಿಗಾದರು ಲಾಟರಿ ಹೊಡೆದರೆ ಈ ಅದೃಷ್ಟ ನಮಗೂ ಬರಬಾರದೆಂದು ಅಂದುಕೊಳ್ಳುತ್ತೇವೆ. ಆದರೆ, ಅದಕ್ಕೆಲ್ಲಾ ಕಾಲಕೂಡಿ ಬರಬೇಕಷ್ಟೇ. ಇಂತಹದ್ದೇ ಘಟನೆಯೊಂದು ಕೇರಳದ ವ್ಯಕ್ತಿಯೊಬ್ಬರ ಬದುಕಿನಲ್ಲಿ ನಡೆದಿದೆ. ಈ ವ್ಯಕ್ತಿಯ ಕಥೆ ಓದಿದ್ರೆ ಏನು ಅದೃಷ್ಟವಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಕೇರಳದ ಕೋಯಿಕ್ಕೋಡ್ ಮೂಲದ 50ವರ್ಷದ ಮೊಹಮ್ಮದ್ ಬಾವಾ ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ಇವರು 8 ತಿಂಗಳ ಹಿಂದಷ್ಟೇ ಹೊಸ ಮನೆಯೊಂದನ್ನು ಕಟ್ಟಿಸಿದ್ದರು. ಆದರೆ ತಮ್ಮ ಸಾಲದ ಹೊರೆಯನ್ನು ತೀರಿಸಲು ಇನ್ನೇನು ಮನೆ ಮಾರಾಟ ಮಾಡಬೇಕು ಎಂದು ಅವರು ಅಂದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಅವರಿಗೆ 1 ಕೋಟಿ ರೂ. ಬಂಪರ್ ಲಾಟರಿ ಹೊಡೆದಿದೆ. ಬಾವಾ ದಂಪತಿಗೆ ಐವರು ಮಕ್ಕಳಿದ್ದಾರೆ. ಅದರಲ್ಲಿ ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ. ಇಬ್ಬರು ಹಿರಿಯ ಹೆಣ್ಣು ಮಕ್ಕಳು ಮದುವೆಯಾಗಿದ್ದು, ಉಳಿದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ.
ಮನೆ ನಿರ್ಮಾಣ ಹಾಗೂ ಮಕ್ಕಳ ಮದುವೆಗೆಂದು ಸಾಲ ಮಾಡಿರುವ ಸಾಲದ ಸುಳಿಯಲ್ಲಿ ಬಾವಾ ಸಿಲುಕಿದ್ದರು. ಅದಕ್ಕಾಗಿ ಅವರು ಬ್ಯಾಂಕ್ ಹಾಗೂ ಸಂಬಂಧಿಕರಿಂದ ಸುಮಾರು 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ತಿಳಿದುಬಂದಿದೆ . ಅಲ್ಲದೆ, ಕತಾರ್ ನಲ್ಲಿರುವ ಮಗನಿಗೆ ಹಣ ಕಳುಹಿಸಲು ಸಾಲ ಮಾಡಿದ್ದರು. ಗೆಳೆಯರು ಯಾರೂ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಜಾಕ್ ಪಾಟ್ ಹೊಡೆಯಬಹುದೆಂಬ ನಿರೀಕ್ಷೆಯಲ್ಲಿ ಬಾವ ಹೊಸ ಅಂಗಡಿಯ ಏಜೆನ್ಸಿಯೊಂದರಿಂದ ಲಾಟರಿ ಟಿಕೆಟ್ ಖರೀದಿಸುತ್ತಲೇ ಇದ್ದರು.
ಇತ್ತ ಸಾಲಗಾರರ ಕಾಟ ಹೆಚ್ಚಾದ್ದರಿಂದ ತನ್ನ 2000 ಚದರ ಅಡಿಯಲ್ಲಿ ನಿರ್ಮಿಸಿದ್ದ ಕನಸಿನ ಮನೆಯನ್ನು 40 ಲಕ್ಷ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ಅದಕ್ಕೆ ಅವರು ಸೋಮವಾರ ಮುಂಗಡ ಹಣವನ್ನೂ ಪಡೆದಿದ್ದರು. ಮಕ್ಕಳನ್ನು ಕರೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸಲು ಮುಂದಾಗಿದ್ದರು. ಇನ್ನೇನು ಒಂದು ಗಂಟೆಯಲ್ಲಿ ಮನೆ ಮಾರಾಟವಾಗಬೇಕು ಎನ್ನುವಷ್ಟರಲ್ಲಿ ಬಾವಾ ಅವರಿಗೆ 1 ಕೋಟಿ ರೂ. ಯುಟ್ಯೂಬ್ ಬಂಪರ್ ಲಾಟರಿ ಹೊಡೆದಿದೆ. ಕಷ್ಟದಲ್ಲಿದ್ದ ಕುಟುಂಬಕ್ಕೆ ಅದೃಷ್ಟ ಖುಲಾಯಿಸಿದೆ. ತೆರಿಗೆಯಲ್ಲ ಕಳೆದ ಬಾವಾ ಕೈಗೆ 63 ಲಕ್ಷ ರೂ. ಸಿಕ್ಕಿದೆ. ಮನೆ ಕೊಳ್ಳಲು ಸಂಜೆ ಬಾವಾರ ಮನೆಯ ಬಳಿ ಬಂದ ರಿಯಲ್ ಎಸ್ಟೇಟ್ ಬೋಕರ್‌ಗೆ ಹಣ ಹಿಂತಿರುಗಿಸಿ, ಮನೆ ಮಾರುವುದಿಲ್ಲ ಎಂದಿದ್ದಾರೆ.