ಮಂಗಳೂರು: ನಿಷೇಧಿತ ಗಾಂಜಾ ಹೊಂದಿದ್ದ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
Saturday, July 9, 2022
ಮಂಗಳೂರು: ನಿಷೇಧಿತ ಮಾದಕದ್ರವ್ಯ ಗಾಂಜಾವನ್ನು ಹೊಂದಿರುವ ಆರೋಪದ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ನಗರದ ವೆಲೆನ್ಸಿಯಾ ಸೂಟರ್ ಪೇಟೆಯಲ್ಲಿನ ವಸತಿಗೃಹಕ್ಕೆ ದಾಳಿ ನಡೆಸಿ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಮೂಲತಃ ಕೇರಳ ರಾಜ್ಯದ ನಿವಾಸಿಗಳು, ಪ್ರಸ್ತುತ ಮಂಗಳೂರು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಾನೂಫ್ ಅಬ್ದುಲ್ ಗಫೂರ್(21),
ಮೊಹಮ್ಮದ್ ರಸೀನ್(22), ಗೋಕುಲ ಕೃಷ್ಣನ್(22), ಶಾರೂನ್ ಆನಂದ(19), ಅನಂತು ಕೆ ಪಿ(18), ಅಮಲ್(21), ಅಭಿಷೇಕ್(21), ನಿದಾಲ್(21), ಶಾಹೀದ್ ಎಂ ಟಿ ಪಿ(22), ಫಹಾದ್ ಹಬೀಬ್(22), ಮೊಹಮ್ಮದ್ ರಿಶಿನ್(22), ರಿಜಿನ್ ರಿಯಾಜ್(22) ಬಂಧಿತ ವಿದ್ಯಾರ್ಥಿಗಳು. ಇವರಲ್ಲಿ 9 ಮಂದಿ ಮಂಗಳೂರಿನ ಯೆನೆಪೋಯ ಕಾಲೇಜಿನ ಪದವಿ ವಿದ್ಯಾರ್ಥಿಗಳಾಗಿದ್ದು, 3 ಮೂವರು ಇಂದಿರಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಆರೋಪಿತ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದು ಈ ಗಾಂಜಾವನ್ನು ಸಂಗ್ರಹಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ವೆಲೆನ್ಸಿಯಾದ ಸೂಟರ್ ಪೇಟೆಯಲ್ಲಿದ್ದ ಇವರಿದ್ದ ವಸತಿಗೃಹಕ್ಕೆ ದಾಳಿ ನಡೆಸಿ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 900 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಗಾಂಜಾ ಸೇದುವ ಸ್ಮೋಕಿಂಗ್ ಪೈಪ್, ರೋಲಿಂಗ್ ಪೇಪರ್ ಗಳು, 4,500 ರೂ. ನಗದು, 11 ಮೊಬೈಲ್ ಫೋನ್ ಗಳು ಹಾಗೂ ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 2,85,000 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಇವರಲ್ಲಿ 11 ಮಂದಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.